ವಿಜಯಪುರ: ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾ ಘಟಕದಿಂದ ಗುರುವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ‘ಈಚೆಗೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ಕೇವಲ ಶೋಷಣೆಯಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
1989ರ ಪ್ರಕಾರ ದಲಿತರ ಮೇಲೆ ದೌರ್ಜನ್ಯ ಕುರಿತು ದೌರ್ಜನ್ಯ ಪ್ರಕರಣ ದಾಖಲಿಸಿದರೆ, ಅದಕ್ಕೆ ವಿರುದ್ಧವಾಗಿ ಕೌಂಟರ್ ಕೇಸ್‌ಗಳನ್ನು ದಾಖಲಾಗುತ್ತಿವೆ. ಇಂತಹ ಕೌಂಟರ್ ಕೇಸ್‌ಗಳ ವಿರುದ್ಧ ತ್ವರಿತ ನ್ಯಾಯಕ್ಕಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆ ತೆರೆಯುವ ಮೂಲಕ ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಘಟಕದ ಸಂಚಾಲಕಿ ಸವಿತಾ ವಗ್ಗರ, ಜಿಲ್ಲಾ ಸಂಘಟನಾ ಸಂಚಾಲಕ ಚೇತನ ತೊರವಿ, ಯಲ್ಲಪ್ಪ ಕಾಂಬಳೆ, ಭೀಮಣ್ಣ ಹಂಚಿನಾಳ, ಭಾಸ್ಕರ ಬೋರಗಿ, ಸುಖದೇವ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.