ADVERTISEMENT

ಇಪಿಎಸ್ 95 ಪಿಂಚಣಿದಾರರ ಬೇಡಿಕೆ ಈಡೇರಿಸಲು ಆಗ್ರಹ

ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 13:44 IST
Last Updated 25 ನವೆಂಬರ್ 2022, 13:44 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಇಪಿಎಸ್ 95 ಪಿಂಚಣಿದಾರರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಇಪಿಎಸ್ 95 ಪಿಂಚಣಿದಾರರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ಇಪಿಎಸ್ 95 ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸೆಟಲೈಟ್ ಬಸ್‌ ನಿಲ್ದಾಣ ಮುಂಭಾಗದ ರಸ್ತೆಯಿಂದ ಆರಂಭವಾದಪ್ರತಿಭಟನಾ ರ‍್ಯಾಲಿ ಶಿವಾಜಿ ಸರ್ಕಲ್, ಗಾಂಧಿಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ಸರ್ಕಲ್‌ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದರು.

‘ರಾಷ್ಟ್ರೀಯ ಭವಿಷ್ಯ ನಿಧಿ ಪಿಂಚಣಿ ಇಲಾಖೆಯಿಂದ ಅತ್ಯಲ್ಪ ಮೊತ್ತದ ಪಿಂಚಣಿ ಬರುತ್ತಿದ್ದು, ಜೀವನ ನಿರ್ವಹಣೆ ಮಾಡಲು ಇದರಿಂದ ಸಾಧ್ಯವಾಗುತ್ತಿಲ್ಲ. ನಮ್ಮ ವಂತಿಕೆಯ ಹಣದಿಂದಲೇ ಪಿಂಚಣಿ ನೀಡಲಾಗುತ್ತಿದೆ. ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿರುವ ಪಿಂಚಣಿ ಮೊತ್ತಕ್ಕಿಂತಲೂ ಕಡಿಮೆ ಮೊತ್ತವನ್ನು ಎಷ್ಟೋ ನಿವೃತ್ತ ನೌಕರರು ಪಡೆಯುತ್ತಿದ್ದಾರೆ. ಹೀಗಾಗಿ ಈ ಅವೈಜ್ಞಾನಿಕ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸಿ, ಕನಿಷ್ಠ ₹7,500 ನೀಡುವ ಜೊತೆಗೆ ಡಿಎ ಹಾಗೂ ಆರೋಗ್ಯ ಸೌಲಭ್ಯಗಳನ್ನೂ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ನೌಕರರ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಸಲ್ಲದ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ಉದ್ದೇಶಪೂರ್ವಕವಾಗಿ ದಾಖಲಿಸಿ ಲಕ್ಷಾಂತರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಅಡ್ಡ ಕಾನೂನು ಬಳಸಿ ಪಿಂಚಣಿದಾರರನ್ನು ಬೆದರಿಸಲು ಸಾಧ್ಯವಿಲ್ಲ. ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರಕಬೇಕು. ಅಲ್ಲಿಯ ತನಕ ಹೋರಾಟ ನಿಲ್ಲುವುದಿಲ್ಲ ಎಂದರು.

ಇಪಿಎಸ್ 95 ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಡಿಸೆಂಬರ್‌ 24ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಸಂಘರ್ಷ ಸಮಿತಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಕಮಾಂಡರ್‌ ಅಶೋಕ ರಾವುತ್‌, ರಾಷ್ಟ್ರೀಯ ಕಾರ್ಯದರ್ಶಿ ವಿರೇಂದ್ರ ಸಿಂಘ, ರಾಷ್ಟ್ರೀಯ ಸಲಹೆಗಾರ ಪಿ.ಎನ್‌.ಪಾಟೀಲ,ಕೆ.ಎಸ್.ಆರ್.ಟಿ.ಸಿ. ಸ್ಟಾಪ್ ಅಂಡ್‌ ವರ್ಕಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಐ.ಐ.ಮುಶ್ರೀಫ್‌, ಆರ್.ಎ. ಫಣಿಬಂದ, ಎನ್.ಎ.ಸಿ. ಉಪಾಧ್ಯಕ್ಷ ವಿ.ಕೆ. ಗಡದ, ಎಸ್.ಕೆ. ಜಹಾಗೀರದ, ಅಧ್ಯಕ್ಷ ಎ.ಎಸ್. ದಿವಾನಜಿ, ಉಪಾಧ್ಯಕ್ಷ ವಸ್ತ್ರದನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆ.ಎಸ್‌.ಆರ್‌.ಟಿ.ಸಿ, ಬಿ.ಎಲ್‌.ಡಿ.ಇ., ಶ್ರೀ ಸಿದ್ದೇಶ್ವರ ಬ್ಯಾಂಕ್‌, ಡಿ.ಸಿ.ಸಿ ಬ್ಯಾಂಕ್‌, ಜಿ.ಓ.ಸಿ.ಸಿ ಬ್ಯಾಂಕ್‌, ವಿವಿಧ ಸಕ್ಕರೆ ಕಾರ್ಖಾನೆ, ಸ್ಪಿನ್ನಿಂಗ್‌ ಮಿಲ್‌, ನಿವೃತ್ತ ಇಪಿಎಸ್‌ 95 ಪಿಂಚಣಿದಾರರ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.