ADVERTISEMENT

ವಿಜಯಪುರ: ವಿದ್ಯುತ್ ಖಾಸಗಿಕರಣ ಬಿಲ್‌ ಹಿಂಪಡೆಯಲು ಆಗ್ರಹ

ಸೆ.12ಕ್ಕೆ ರೈತರಿಂದ ಬೆಂಗಳೂರು ಚಲೋ: ವಿಜಯ ಪೂಜಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 11:25 IST
Last Updated 7 ಸೆಪ್ಟೆಂಬರ್ 2022, 11:25 IST
ವಿಜಯ ಪೂಜಾರ
ವಿಜಯ ಪೂಜಾರ   

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗಿಕರಣ ಬಿಲ್‌ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಸೆಪ್ಟೆಂಬರ್‌ 12ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ವಿಜಯಪುರ ಜಿಲ್ಲಾ ಸಮಿತಿ ಅಧ್ಯಕ್ಷವಿಜಯ ಪೂಜಾರ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಹಿಂಪಡೆದಿರುವ ಮೂರು ಕೃಷಿ ಕಾನೂನಗಳನ್ನು ರಾಜ್ಯ ಸರ್ಕಾರವೂ ಹಿಂಪಡೆಯಬೇಕು ಹಾಗೂ ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಕಾರ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಸರಕಾರ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ತರಕಾರಿ ಬೆಳೆಗೆ ಕೇರಳ ಮಾದರಿಯಲ್ಲಿ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಅಲಮಟ್ಟಿ ಆಣೆಕಟ್ಟು ಎತ್ತರವನ್ನು 519 ಮೀಟರ್‌ನಿಂದ 524.256ಕ್ಕೆ ಎತ್ತರಿಸಬೇಕು ಹಾಗೂ ತುಂಗಾಭದ್ರಾ ನದಿಗೆ ನವಲಿ ಹತ್ತಿರ ಸಮಾನಾಂತರ ಜಲಾಶಯನಿರ್ಮಾಣ ಕಾರ್ಯ ಶೀಘ್ರ ಆರಂಭಿಸಲು ಅಗತ್ಯ ಅನುದಾನ ಒದಗಿಸಬೇಕು ಎಂದರು.

ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆಮಿಮೆ ಹಾಗೂ ಬೆಳೆ ಪರಿಹಾರ ಕೂಡಲೇ ನೀಡಬೇಕು, ರೈತರು ಪಡೆದ ಟ್ರ್ಯಾಕ್ಟರ್‌ ಸಾಲ, ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ, ಪಾಲಿ ಹೌಸ್ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಾದ್ಯಂತ ಬಗರ್‌ ಹುಕಂ ಸಾಗುವಳಿದಾರ ರೈತರಿಗೆ ಹಕ್ಕು ಪತ್ರ ನೀಡಬೇಕು. 99 ವರ್ಷ ರೈತರಿಗೆ ಲೀಸ್ ನೀಡುವ ಕಾಯಿದೆ ಕೈ ಬಿಟ್ಟು, ಬಡ ರೈತರಿಗೆ ಪಟ್ಟಾ ನೀಡಬೇಕು ಎಂದು ಹೇಳಿದರು.

ರಾಜ್ಯದಾದ್ಯಂತ ಕಬ್ಬಿಗೆ ಕಾರ್ಖಾನೆಗಳು ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ದರ ನಿಗದಿ ಪಡಿಸಿದ್ದು, ಸರ್ಕಾರ ರಾಜ್ಯಾದ್ಯಂತ ಒಂದೇ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಮಣಪುರಂ ಹಾಗೂ ಮುತ್ತೋಟ್‌ ಬ್ಯಾಂಕುಗಳು ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಅಡವಿಟ್ಟ ಬಂಗಾರದ ಒಡವೆಗಳನ್ನು 3 ತಿಂಗಳ ಒಳಗೆ ಹರಾಜು ಹಾಕಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಯಾವುದೇ ಒಪ್ಪಿಗೆ ಪಡೆಯದೆ ಬಂಗಾರವನ್ನು ಹರಾಜು ಮಾಡಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಮೊಸಮಾಡುತ್ತಿದ್ದಾರೆ, ಈ ಎರಡು ಬ್ಯಾಂಕುಗಳು ಹರಾಜು ಮಾಡಿರುವ ಚಿನ್ನವನ್ನು ಮಹಿಳೆಯರಿಗೆ ವಾಪಾಸು ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಸಂಗಣ್ಣ ಬಾಗೇವಾಡಿ, ವೈ.ಎಲ್‌.ಬಿರಾದರ, ಪಿರು ಕೆರೂರು, ಮಂಜುನಾಥ ಬಿರಾದಾರ, ಸಿದ್ದು ಯಂಕಂಚಿ, ಗುರಪ್ಪ ನಾಟೀಕಾರ, ಶಾರದಾ ಕಾಳಣ್ಣವರ, ಸಂಗಮ್ಮ ಹಿರೇಮಠ, ಮಲ್ಲನಗೌಡ ಬಗಲಿ, ಬಾಳಣ್ಣ ಕೆಂಬಾವಿ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

***

ರಾಜ್ಯ ಸರ್ಕಾರ ಗೋಮಾಳ ಜಮೀನನ್ನು ಉದ್ದಿಮಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ತಕ್ಷಣ ಕೈ ಬಿಡಬೇಕು

–ವಿಜಯ ಪೂಜಾರ, ಅಧ್ಯಕ್ಷಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.