ಮುದ್ದೇಬಿಹಾಳ : ‘ಪಟ್ಟಣದಲ್ಲಿ ತರಕಾರಿ ವ್ಯಾಪಾರಿಗಳು, ಗೂಡಂಗಡಿಗಳಿಂದ ಟೆಂಡರ್ ಪಡೆದ ವ್ಯಕ್ತಿಯು ನಿಯಮ ಮೀರಿ ದುಪ್ಪಟ್ಟು ಕರ ವಸೂಲಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
‘ಸಂಕಷ್ಟದಲ್ಲಿರುವ ರೈತ ಮಹಿಳೆಯರು ತರಕಾರಿ ಮಾರಾಟ ಮಾಡಿ ತಮ್ಮ ಉಪಜೀವನ ನಡೆಸಬೇಕಾಗಿದೆ. ಇತ್ತ ಬೆಲೆ ಇಲ್ಲದೇ ತಂದಿರುವ ತರಕಾರಿಯನ್ನು ಕೈಗೆ ಬಂದಷ್ಟು ಹಣ ಕೊಟ್ಟು ಮಾರಾಟ ಮಾಡುವ ದುಸ್ಥಿತಿ ಇದೆ. ಕರ ವಸೂಲಿ ಕುರಿತು ಕರೆಯಲಾದ ಟೆಂಡರ್ ವೇಳೆ ತಾವು ಇಂತಿಷ್ಟೇ ಎಂದು ಕರ ವಸೂಲಿ ಮಾಡಿ ಎಂದು ಗುತ್ತಿಗೆ ಪಡೆದವರಿಗೆ ಸೂಚಿಸಿದರೂ ದುಪ್ಪಟ್ಟು ಕರ ವಸೂಲಿ ದಂದೆ ನಡೆದಿದೆ’ ಎಂದು ಪದಾಧಿಕಾರಿಗಳು ದೂರಿದರು.
ಸಂಘಟನೆ ತಾಲ್ಲೂಕು ಅಧ್ಯಕ್ಷ ಮೈಬೂಬ ಕುಳಗೇರಿ ಮಾತನಾಡಿ, ‘ಇದಕ್ಕೆ ಕಡಿವಾಣ ವಿಧಿಸದಿದ್ದರೆ ಹೋರಾಟ ಮುಂದುವರಿಸಲಾಗುವುದು. ಟೆಂಡರ್ ಪಡೆದ ಗುತ್ತಿಗೆದಾರನ ಟೆಂಡರ್ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.
ಪುರಸಭೆ ಕಂದಾಯ ಅಧಿಕಾರಿ ಎನ್.ಎಂ.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಬಾಬುಜಾನ್ ಮಮದಾಪೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ವಿಜಯಕರ್, ಯಾಸೀನ ಅತ್ತಾರ. ಸಂತೋಷ ಚವ್ವಾಣ, ಆಶೀಪ್ ನಿಡಗುಂದಿ, ಶರಣಪ್ಪ ಹೊಸಮನಿ, ರಹೇಮಾನ್ ಹಳ್ಳೂರ, ಬಂದೇನವಾಜ್ ಮಮದಾಪೂರ, ಅಬ್ದುಲರಜಾಕ ಕಲಾದಗಿ, ಮಂಜು ತಿಳಗೋಳ, ರಹಿಂ ಬಾಗವಾನ ಹಾಗೂ ಬಸಪ್ಪ ಮೇಲಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.