ವಿಜಯಪುರ: ಸುಕ್ಷೇತ್ರ ಗುಡ್ಡಾಪುರ ದಾನಮ್ಮದೇವಿ ಸನ್ನಿಧಿಯ ಉತ್ತರ, ದಕ್ಷಿಣ ಭಾಗದಲ್ಲಿ ಗೋಪುರ ನಿರ್ಮಾಣ, ದೀಪ ಸ್ತಂಭಗಳ ನಿರ್ಮಾಣ, ನಂದಿ ಪ್ರತಿಷ್ಠಾಪನೆ, ಕಾತರಕಂಠಿ ಅಭಿವೃದ್ಧಿ, ಉದ್ಯಾನ ನಿರ್ಮಾಣ, ಪುರಾತನ ಬಾವಿ ನವೀಕರಣ ಸೇರಿದಂತೆ ₹7 ಕೋಟಿ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀದಾನಮ್ಮದೇವಿ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಗುಡ್ಡಾಪುರದಲ್ಲಿ ಬೀದಿ ದೀಪ ಸೇರಿದಂತೆ ವಿವಿಧ ಸೌಕರ್ಯಗಳ ಕೊರತೆ ಇತ್ತು. ವರ್ಷದ ಹಿಂದೆ ಟ್ರಸ್ಟ್‌ಗೆ ಹೊಸ ಪದಾಧಿಕಾರಿಗಳಿಗಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇವಾಲಯದ ಸನ್ನಿಧಿಯಲ್ಲಿ ಅಭಿವೃದ್ಧಿ ಕಾರ್ಯ ಸಂಕಲ್ಪ ಮಾಡಿದ್ದೆವು, ಅದರನ್ವಯ ದೇವಾಲಯದ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗಿದೆ ಎಂದರು.
₹31 ಲಕ್ಷ ವೆಚ್ಚದಲ್ಲಿ ದೀಪಸ್ತಂಭಗಳ ಸ್ಥಾಪನೆ, ಗೋಪುರ ಹಾಗೂ ಮಹಾದ್ವಾರಕ್ಕೆ ಬಣ್ಣ ಹಾಗೂ ಅಲಂಕಾರ ಕಾರ್ಯ, ದೇವಿ ಅನುಷ್ಠಾನಗೈದ ಪವಿತ್ರ ಸ್ಥಳ ಕಾತರಕಂಠಿ ಸ್ಥಳದಲ್ಲಿ ದೇವಾಲಯ ನಿರ್ಮಾಣ ಹಾಗೂ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಅಲ್ಲಿರುವ ವಿಶಾಲ ಜಾಗೆಯಲ್ಲಿ ಉದ್ಯಾನವನ ನಿರ್ಮಾಣ, ಯಾತ್ರಿ ನಿವಾಸ ನಿರ್ಮಾಣಕ್ಕೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.
ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳ ಪೈಕಿ ಸರತಿ ಸಾಲಿಗಾಗಿ ಸ್ಟೇನ್ ಲೆಸ್ ಸ್ಟೀಲ್ ಗ್ರಿಲ್ ಅಳವಡಿಕೆ, ಸಭಾಭವನ, ಗೋಪುರಗಳ ಪ್ರಗತಿ, ಕರ್ನಾಟಕ ಭವನಕ್ಕೆ ಜನರೇಟರ್ ಸೇರಿದಂತೆ ವಿವಿಧ ಪರಿಕರಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ದಾನಿಗಳ ನೆರವಿನಿಂದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಅನುದಾನ ನೀಡುತ್ತಿವೆ ಎಂದರು.
ಕರ್ನಾಟಕ ಭವನದಲ್ಲಿ ಅನ್ನದಾಸೋಹಕ್ಕೆ 80 ಟೇಬಲ್ ಅಳವಡಿಸಲಾಗಿದ್ದು, ಏಕಕಾಲಕ್ಕೆ ಸಾವಿರ ಜನರು ಪ್ರಸಾದ ಸೇವಿಸುವ ವ್ಯವಸ್ಥೆ ಇದ್ದು, ಈಗ ಪುನಃ 80 ಟೇಬಲ್ ಅಳವಡಿಸುವ ಮೂಲಕ ಇನ್ನೂ ಸಾವಿರ ಜನರು ಏಕಕಾಲಕ್ಕೆ ಅನ್ನಪ್ರಸಾದ ಸೇವಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯ ಯೋಜನೆ ರೂಪಿಸಲಾಗಿದೆ. ಜೊತೆಗೆ ಮತ್ತೊಂದು ಯಾತ್ರಿ ನಿವಾಸ ನಿರ್ಮಾಣಕ್ಕೆ ಕ್ರಮಕೂಗೊಳ್ಳಲಾಗಿದೆ ಎಂದರು.
ಜ್ಞಾನ ದಾಸೋಹ:
ಅನ್ನದಾಸೋಹಿ ದಾನಮ್ಮದೇವಿ ಸನ್ನಿಧಿಯಲ್ಲಿ ಅನ್ನದ ಜೊತೆಗೆ ಜ್ಞಾನ ದಾಸೋಹ ಮಾಡಲಾಗುತ್ತಿದ್ದು, ಬಡವರಿಗೂ ಸಹ ಅನುಕೂಲವಾಗಲು ಅತ್ಯಂತ ಕಡಿಮೆ ಅದು ಸಾಂಕೇತಿಕ ಎನ್ನುವಷ್ಟು ರೀತಿಯಲ್ಲಿ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ₹3 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ದೇವಸ್ಥಾನ ಟ್ರಸ್ಟಿನ ನಿರ್ದೇಶಕ ಸಾಗರ ಚಂಪಣ್ಣವರ, ಕಾರ್ಯದರ್ಶಿ ವಿಠಲ ಪೂಜಾರಿ, ಅಕೌಂಟೆಂಟ್ ಈರಣ್ಣ ಜೇವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.