ADVERTISEMENT

ಮುದ್ದೇಬಿಹಾಳ: ಹೊಸಮಠದ ಜವಾಬ್ದಾರಿ ಮುನ್ನಡೆಸಲು ಭಕ್ತರ ನಿವೇದನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:09 IST
Last Updated 21 ಜುಲೈ 2025, 6:09 IST
ಮುದ್ದೇಬಿಹಾಳದ ಹೊಸಮಠದ ಜವಾಬ್ದಾರಿ ವಹಿಸಿಕೊಳ್ಳುವಂತೆ ತಾಲ್ಲೂಕಿನ ಭಕ್ತರು ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸ್ವಾಮೀಜಿ ಅವರನ್ನು ಭಾನುವಾರ ಭೇಟಿಯಾಗಿ ಆಹ್ವಾನಿಸಿದರು
ಮುದ್ದೇಬಿಹಾಳದ ಹೊಸಮಠದ ಜವಾಬ್ದಾರಿ ವಹಿಸಿಕೊಳ್ಳುವಂತೆ ತಾಲ್ಲೂಕಿನ ಭಕ್ತರು ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸ್ವಾಮೀಜಿ ಅವರನ್ನು ಭಾನುವಾರ ಭೇಟಿಯಾಗಿ ಆಹ್ವಾನಿಸಿದರು   

ಮುದ್ದೇಬಿಹಾಳ: ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಹೊಸಮಠದ ಜವಾಬ್ದಾರಿ ವಹಿಸಿಕೊಂಡು ನಗರದ ಜನತೆಗೆ ಧರ್ಮ ಮಾರ್ಗದರ್ಶನ ಮಾಡಬೇಕು ಎಂದು ಕೋರಿ ಹುನಗುಂದದಲ್ಲಿರುವ ಗಚ್ಚಿನಮಠದ ಪೀಠಾಧಿಪತಿ ಅಮರೇಶ್ವರ ದೇವರು ಸ್ವಾಮೀಜಿ ಅವರಿಗೆ ಮುದ್ದೇಬಿಹಾಳದ ಭಕ್ತರು ಭಾನುವಾರ ಆಹ್ವಾನ ನೀಡಿದ್ದಾರೆ.

ಮುದ್ದೇಬಿಹಾಳದಿಂದ ಹುನಗುಂದಕ್ಕೆ ತೆರಳಿದ್ದ ಪ್ರಮುಖ ಮುಖಂಡರ ನಿಯೋಗ, ಸ್ವಾಮೀಜಿಯವರನ್ನು ಭೇಟಿಯಾಗಿ ಸನ್ಮಾನಿಸಿ ಮುದ್ದೇಬಿಹಾಳ ಭಕ್ತರ ಕೋರಿಕೆಯನ್ನು ಮುಂದಿಟ್ಟಿದ್ದಾರೆ.

ಈ ಕುರಿತು ದೂರವಾಣಿಯಲ್ಲಿ ಪ್ರಜಾವಾಣಿಯೊಂದಿಗೆ ಮಾತನಾಡಿದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಕಳೆದ ಮೂರು ವರ್ಷದ ಹಿಂದೆ ಹುನಗುಂದಕ್ಕೆ ತೆರಳಿ ಅಮರೇಶ್ವರ ದೇವರನ್ನು ಭೇಟಿ ಮಾಡಿ ಭಕ್ತರ ಇಚ್ಛೆಯನ್ನು ತಿಳಿಸಿದ್ದೇವು. ಗಚ್ಚಿನಮಠಕ್ಕೆ ಈಗಾಗಲೇ ಪೀಠಾಧಿಕಾರಿಯಾಗಿರುವ ಅವರು ಮುದ್ದೇಬಿಹಾಳದ ಹೊಸಮಠವನ್ನು ಶಾಖಾ ಮಠವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಭಕ್ತರು ಸಹಕಾರ ಮಾಡಲಿದ್ದಾರೆ ಎಂದು ಹೇಳಿದರು.

ADVERTISEMENT

ಈ ಕುರಿತು ಭಕ್ತರ ಅಭಿಪ್ರಾಯ ಸಂಗ್ರಹಿಸಲು ಆ.3ರಂದು ಕಿಲ್ಲಾದ ಹೊಸಮಠದಲ್ಲಿ ಸಭೆ ಕರೆಯಲಾಗಿದ್ದು, ಅಂದೇ ಅವರನ್ನು ಮಠದ ಉಸ್ತುವಾರಿ, ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಲು ಚರ್ಚಿಸಿ ಸಂಪೂರ್ಣ ಒಪ್ಪಿಗೆಯನ್ನು ಭಕ್ತರ ಮೂಲಕ ತಿಳಿಸಲಾಗುವುದು. ಇದಕ್ಕೆ ಸ್ವಾಮೀಜಿಯವರು ಅಂದಿನ ಸಭೆಗೆ ಬರಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಹೊಸಮಠ, ಹುನಗುಂದದ ಗಚ್ಚಿನಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಅಮರೇಶ್ವರ ದೇವರು ಸ್ವಾಮೀಜಿಯವರ ಸಂಬಂಧಿಕರೇ ಹೊಸಮಠದ ಜವಾಬ್ದಾರಿ ಹಿಂದೆ ನಿಭಾಯಿಸುತ್ತಿದ್ದರು ಎಂದು ತಿಳಿಸಿದರು.

ನಿಯೋಗದಲ್ಲಿ ಮುಖಂಡರಾದ ಅಶೋಕ ನಾಡಗೌಡ, ಶಿವಾನಂದ ಹಿರೇಮಠ, ಕಾಮರಾಜ ಬಿರಾದಾರ, ಗೋಪಿ ಮಡಿವಾಳರ, ಬಸಲಿಂಗಪ್ಪ ರಕ್ಕಸಗಿ, ನಾಗಭೂಷಣ ನಾವದಗಿ, ಅಮರೇಶ ಗೂಳಿ, ರಾಜು ರಾಯಗೊಂಡ, ಪ್ರವೀಣ ನಾಗಠಾಣ, ಪುಟ್ಟು ರಾಯನಗೌಡ, ಸುಧೀರ ನಾವದಗಿ, ಮಹಾಂತೇಶ ಬೂದಿಹಾಳಮಠ, ಮುರುಗೇಶ ಮೋಟಗಿ, ಲೋಹಿತ ನಾಲತವಾಡ, ರವಿ ಅಮರಣ್ಣವರ,ಶರಣಯ್ಯ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.