ಮುದ್ದೇಬಿಹಾಳ : ಅಂಗವಿಕಲರಿಗೆ ಆಸರೆಯಾಗಲೆಂದು ನೀಡಲಾದ ಸೌಲಭ್ಯಗಳನ್ನು ಆಯ್ಕೆಯಾದ ಫಲಾನುಭವಿಗಳು ತೆಗೆದುಕೊಂಡು ಹೋಗದ ಕಾರಣ ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಅವುಗಳು ಅನಾಥವಾಗಿ ಬಿದ್ದಿವೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಶೇ50ರಷ್ಟು ಹಾಗೂ ದೆಹಲಿಯ ಅಲಿಂ ಕೋ ಸಂಸ್ಥೆಯಿಂದ ಶೇ50 ಅನುದಾನದಲ್ಲಿ ರಾಜ್ಯದಾದ್ಯಂತ ಅಂಗವಿಕಲರಿಗೆ ಹಲವು ಸಾಮಗ್ರಿಗಳನ್ನು ಒದಗಿಸಲಾಗಿದೆ. ಅದರಂತೆ ಮುದ್ದೇಬಿಹಾಳ ತಾಲ್ಲೂಕಿನಲ್ಲೂ ಅಂಗವಿಕಲರಿಗೆ ಸೌಲಭ್ಯಗಳನ್ನು ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ನೀಡಲಾಗಿತ್ತು. ಆದರೆ ಕೆಲವರು ತಮಗೆ ಈ ಸೌಲಭ್ಯವೇ ಬೇಡ ಎಂದು ಬಿಟ್ಟಿದ್ದು ತಮಗೆ ಬಂದಿರುವ ಸಾಧನಗಳನ್ನು ಕೊಂಡೊಯ್ದಿಲ್ಲ.
ಜಂಟಿ ಸಹಭಾಗಿತ್ವದಲ್ಲಿ ಕೃತಕ ಕಾಲುಗಳು, ಟ್ರೈಸಿಕಲ್, ಶ್ರವಣ ಸಾಧನ, ಬಗಲಿನ ಬಡಿಗೆ, ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, ಗಾಲಿ ವಾಕರ್‌ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ತಾಪಂ ಕಚೇರಿ ಆವರಣದಲ್ಲಿ ಟ್ರೈಸಿಕಲ್, ಕೃತಕ ಕಾಲುಗಳು, ಗಾಲಿ ವಾಕರ್‌ಗಳು ಅನಾಥವಾಗಿ ಬಿದ್ದಿವೆ.
ಅಗತ್ಯ ಇದ್ದವರಿಗಾದರೂ ವಿತರಣೆ ಮಾಡಿದರೆ ಆಸರೆಯಾಗಬಹುದು. ಆದರೆ ಇಲ್ಲಿನ ಅಧಿಕಾರಿಗಳು ಈ ಸಾಮಗ್ರಿಗಳನ್ನೆಲ್ಲಾ ನೋಡಿಯೂ ನೋಡದಂತೆ ಮೌನವಾಗಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದು ಅಂಗವಿಕಲರಿಗೆ ಅನುಕೂಲವಾಗಲಿ ಎಂದು ಕೊಟ್ಟಿರುವ ಸಾಧನಗಳು ಹೀಗೆ ವ್ಯರ್ಥವಾಗುತ್ತಿವೆ ಎಂದರೆ ಮುಂದಿನ ದಿನಗಳಲ್ಲಿ ಸಹಾಯ ಮಾಡಲು ಮುಂದೆ ಬರುತ್ತಾರೆಯೇ ಎಂಬ ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಲ್ಲಿ ಮೂಡುತ್ತವೆ.
ಸ್ವಯಂ ಉದ್ಯೋಗಕ್ಕೂ ಅವಕಾಶ : ಅಂಗವಿಕಲರಿಗೆ ಸ್ವಯಂ ಉದ್ಯೋಗ ಮಾಡಲು ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರು ಶೇ 50ರಷ್ಟು ಸಹಾಯ ಧನ ನೀಡುತ್ತಿದ್ದು ರೊಟ್ಟಿ ಮಷೀನ್, ಹಿಟ್ಟಿನ ಗಿರಣಿ, ಪಟ್ಟಿ ಶಾಪ್, ಜೆರಾಕ್ಸ್ ಅಂಗಡಿ, ಕೋಳಿ ಸಾಕಾಣಿಕೆ ಶೆಡ್, ಹೊಲಿಗೆ ಯಂತ್ರ, ಕರ್ಪೂರ ತಯಾರಿಸುವ ಯಂತ್ರ ಇನ್ನು ಹಲವಾರು ಯಂತ್ರಗಳನ್ನು ವಿದ್ಯುತ್ ಇಲ್ಲದೆ ಸೋಲಾರ್ ಮೇಲೆ ನಡೆಸಲು ಶೇ50 ರಷ್ಟು ಸಹಾಯಧನ ನೀಡುತ್ತಿದ್ದು ಆಸಕ್ತರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ ಮಾಹಿತಿ ನೀಡುತ್ತಾರೆ.
ತಾಪಂ ಕಚೇರಿ ಆವರಣದಲ್ಲಿರುವ ಅಂಗವಿಕಲರ ಸಾಮಗ್ರಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.-ನಿಂಗಪ್ಪ ಮಸಳಿ ತಾಪಂ ಇಒ
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ಸೇರಿ 60 ಟ್ರೈಸಿಕಲ್‌ಗಳು ಬಂದಿದ್ದು ಏಳು ಹಾಗೆ ಉಳಿದುಕೊಂಡಿವೆ. ಒಂದು ವೀಲ್ ಚೇರ್ ಸಣ್ಣ ಗಾಲಿ ವಾಕರ್ ಆರು ಉಳಿದಿವೆ. ಕೃತಕ ಕಾಲು ಮತ್ತು ಕ್ಯಾಲಿಪರ್ ಹಳೆ ಮಾಡಲ್ ಇರುವುದರಿಂದ ಅವುಗಳನ್ನು ಯಾರು ತೆಗೆದುಕೊಂಡು ಹೋಗಿಲ್ಲ.ಆಯ್ಕೆಯಾದ ಫಲಾನುಭವಿಗಳೆಲ್ಲ ತಮಗೆ ಬ್ಯಾಟರಿ ಚಾಲಿತಇಂಧನ ಚಾಲಿತ ತ್ರಿಚಕ್ರ ವಾಹನವೇ ಬೇಕು ಎಂದು ಇವುಗಳನ್ನು ಒಯ್ದಿಲ್ಲ. ಜಿಲ್ಲಾ ಕಚೇರಿಗೆ ವಾಪಸ್ ಕಳಿಸುತ್ತೇನೆ.ಎಸ್.ಕೆ.ಘಾಟಿ ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.