ವಿಜಯಪುರ: ಇಲ್ಲಿನ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅಂಗವಿಕಲ ವಿದ್ಯಾರ್ಥಿಯೊಬ್ಬ ಪರದಾಡಿದ ಘಟನೆ ನಡೆಯಿತು.
ಕೈಗಳ ಶಕ್ತಿ ಕಳೆದುಕೊಂಡಿರುವ ಅಂಗವಿಕಲ ವಿದ್ಯಾರ್ಥಿ ಮೊಹಮ್ಮದ್ ಅಝ್ಲಾನ್ ನಾಯ್ಕೋಡಿ ಸಹಾಯಕ ಬರಹಗಾರನ ನೆರವು ಒದಗಿಸಲು ಶಾಲೆಗೆ ಫೆಬ್ರುವರಿಯಲ್ಲೇ ಮನವಿ ಮಾಡಿದ್ದರು. ಆದರೆ, ಸಹಾಯಕ ವಿದ್ಯಾರ್ಥಿಯನ್ನು ನೀಡದ ಕಾರಣ ಪರೀಕ್ಷೆ ಬರೆಯಲು ಆಗದೇ ವಿದ್ಯಾರ್ಥಿ ಅಸಹಾಯಕತೆಗೆ ಒಳಗಾದರು. ಇದರಿಂದ ಬೇಸತ್ತ ವಿದ್ಯಾರ್ಥಿ ತಂದೆ ಪರೀಕ್ಷಾ ಕೇಂದ್ರದ ಹೊರಗೆ ಕಣ್ಣೀರು ಹಾಕಿದರು.
ವಿಷಯ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಗವಿಕಲ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಒಂದು ಗಂಟೆಯ ಬಳಿಕ ಸಹಾಯಕನ ನೆರವು ಒದಗಿಸಿದರು.
ಪರೀಕ್ಷಾರ್ಥಿಗೆ ಎದೆನೋವು:
ಮುದ್ದೇಬಿಹಾಳ ಪಟ್ಟಣದ ಚಿನ್ಮಯ ಜೆ.ಸಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಬೇಬಿ ಈರಪ್ಪ ವಡ್ಡರಗೆ ಹೊಟ್ಟೆ ಹಾಗೂ ಎದೆ ನೋವು ಕಾಣಿಸಿಕೊಂಡು ಪರೀಕ್ಷೆಯ ಮಧ್ಯವೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯ ಡಾ.ಪರಶುರಾಮ ವಡ್ಡರ ತುರ್ತು ಚಿಕಿತ್ಸೆ ನೀಡಿದರು.
ತಂದೆ ನಿಧನ;ಪರೀಕ್ಷೆಗೆ ಗೈರು:
ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ನಿವಾಸಿ ಶಂಕ್ರಪ್ಪ ಭಜಂತ್ರಿ ಮಂಗಳವಾರ ನಿಧನರಾದ ಹಿನ್ನೆಲೆಯಲ್ಲಿ ಅವರ ಪುತ್ರ ಮುತ್ತಪ್ಪ ಭಜಂತ್ರಿ, ಸವಿತಾ ಭಜಂತ್ರಿ ಪರೀಕ್ಷೆಗೆ ಗೈರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.