ADVERTISEMENT

ರಾಣಿ ಚಾಂದ ಸುಲ್ತಾನಾ ಗೋರಿ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 12:58 IST
Last Updated 29 ಮೇ 2022, 12:58 IST
ವಿಜಯಪುರ ನಗರದ ಅಲಿರೋಜಾ ಹಿಂಭಾಗದಲ್ಲಿ ಪತ್ತೆಯಾಗಿರುವ ಎರಡನೇ ಇಬ್ರಾಹಿಂ ಆದಿಲ್‍ಶಾಹನ ರಾಣಿ ಚಾಂದ ಸುಲ್ತಾನಾಳ ಗೋರಿ
ವಿಜಯಪುರ ನಗರದ ಅಲಿರೋಜಾ ಹಿಂಭಾಗದಲ್ಲಿ ಪತ್ತೆಯಾಗಿರುವ ಎರಡನೇ ಇಬ್ರಾಹಿಂ ಆದಿಲ್‍ಶಾಹನ ರಾಣಿ ಚಾಂದ ಸುಲ್ತಾನಾಳ ಗೋರಿ   

ವಿಜಯಪುರ:ಎರಡನೇ ಇಬ್ರಾಹಿಂ ಆದಿಲ್‍ಶಾಹನ ರಾಣಿ ಹಾಗೂ ಗೊಲ್ಕೋಂಡ ಸುಲ್ತಾನ್‌ ಇಬ್ರಾಹಿಂ ಕುತ್ಬಶಾಹನ ಮಗಳಾದ ಚಾಂದ ಸುಲ್ತಾನಾ (ಮಲೀಕಾ-ಇ-ಜಹಾನ್)ಳ ಗೋರಿಯನ್ನು ನಗರದ ಸಿಕ್ಯಾಬ್‌ ಮಹಿಳಾ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ಮುಸ್ತಾಕ್‌ ಅಹ್ಮದ್‌ ಅವರು ಬಿಲಾಲ್ ಬಿಲ್‍ ಅವರ ಸಹಕಾರದೊಂದಿಗೆ ಪತ್ತೆ ಹಚ್ಚಿದ್ದಾರೆ.

ನಗರದ ಅಲಿರೋಜಾ ಹಿಂಭಾಗದಲ್ಲಿರುವ ಈ ಗೋರಿಯನ್ನು ಮಹಮ್ಮದ್‌ ಆದಿಲ್‍ಶಾಹನ ರಾಣಿಯಾದ ಬಡಿಬಿ ಸಾಹಿಬಾ (ಕತೀಜಾ ಸುಲ್ತಾನಾ) ನಿರ್ದೇಶನದ ಮೇರೆಗೆ ಕಟ್ಟಲಾಗಿದೆಯೆಂದು ಇದರ ಮೇಲಿರುವ ಶಾಸನದಿಂದ ತಿಳಿದು ಬರುತ್ತದೆ ಎಂದು ಮುಸ್ತಾಕ್‌ ಅಹ್ಮದ್‌ ತಿಳಿಸಿದ್ದಾರೆ.

ಈ ಕಟ್ಟಡವನ್ನು ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಈ ಸುಂದರ ಸ್ಮಾರಕವು ನಾಲ್ಕು ಕಮಾನುಗಳ ಸಹಾಯದಿಂದ ಚೌಕಾಕರವಾಗಿ ರಚಿತವಾಗಿದೆ. ಇದರ ಸಜ್ಜಾಗಳು ಅತ್ಯಂತ ನಯವಾಗಿ ಕೆತ್ತಲಾಗಿದೆ. ಸ್ಮಾರಕದ ಮೇಲ್ಭಾಗದಲ್ಲಿರುವ ನಾಲ್ಕು ದಿಕ್ಕಿನಲ್ಲಿ ಸಣ್ಣ ಮೀನಾರ್‌ಗಳು ಸಂಪೂರ್ಣವಾಗಿ ನಾಶ ಹೊಂದಿವೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಸ್ಮಾರಕದ ಮೇಲ್ಭಾಗದಲ್ಲಿ ಸಸಿಗಳು ಬೆಳೆದಿದ್ದರಿಂದ ಈ ಕಟ್ಟಡ ಬಹಳಷ್ಟು ನಾಶ ಹೊಂದಿದೆ ಇದರ ಮುಂಭಾಗದ ಕಮಾನಿನ ಮೇಲೆ ಪರ್ಶಿಯ ಶಾಸನ ಕೆತ್ತಲಾಗಿದೆ. ಆದರೆ, ಅದರ ಬಹಳಷ್ಟು ಭಾಗ ನಾಶವಾಗಿದೆ ಎಂದು ಹೇಳಿದ್ದಾರೆ.

ಈ ಸ್ಮಾರಕದ ಹಿಂಬದಿಯಲ್ಲಿ ಇನ್ನೊಂದು ಸ್ಮಾರಕವು ಸಂಪೂರ್ಣ ಅವನತಿ ಅಂಚಿನಲ್ಲಿದೆ. ಬಹುಶಃ ಇದು ಇವರ ಸಂಬಂಧಿಕರ ಗೋರಿಗಳಾಗಿರಬಹುದು. ಇಲ್ಲಿಯೂ ಸಹ ಮುಂಭಾಗದ ಕಮಾನುಗಳ ಮೇಲೆ ಸುಂದರವಾದ ಕೆತ್ತನೆಗಳಿವೆ ಎಂದು ತಿಳಿಸಿದ್ದಾರೆ.

ಎರಡನೆ ಇಬ್ರಾಹಿಂ ಆದಿಲ್‍ಶಾಹನು ಚಾಂದ ಸುಲ್ತಾನಳನ್ನು ಕ್ರಿ.ಶ. 1591 ರಲ್ಲಿ ವಿವಾಹವಾದನು. ಚಾಂದ ಸುಲ್ತಾನಾಳು ತುಂಬಾ ಸುಂದರವಾಗಿದ್ದಳು, ಇಬ್ರಾಹಿಂನು ಮನಸಾರೆ ಪ್ರೀತಿಸುತ್ತಿದ್ದನು. ಚಾಂದ ಸುಲ್ತಾನಾಳ ಸೌಂದರ್ಯದ ಬಗ್ಗೆ ಕಿತಾಬ-ಇ-ನೌರಸ್ ಗ್ರಂಥದಲ್ಲಿ ದಖನಿ ಭಾಷೆಯಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾನೆ.

‘ಪುಸ್ತಕ್ ಛಚ್ಛೂ ಸೋ ಸುಂದರಿ
ಖತ್ ಕಾಜರ್ ಕಾಗದ ಪಾಂಡ್‍ರೀ
ಪಲಖಾಂ ಜಿಲ್ಡ್ ಜೋಡ್ ಬಾಂದೆರೀ
ಇಬ್ರಾಹೀಮ್ ಪೂತರೀ ಮೂರತ್ ದೇವ ಮಹಾದೇರಿ’...ಹೀಗೆ ಅನೇಕ ಪದ್ಯಗಳನ್ನು ಚಾಂದ್‌ ಸುಲ್ತಾನಾಳ ಕುರಿತು ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾನ್‌ ರಾಣಿಯ ಗೋರಿಯು ಅವನತಿ ಅಂಚಿನಲ್ಲಿರುವುದು ದುಃಖದ ಸಂಗತಿಯಾಗಿದೆ. ಇಂತಹ ಸ್ಮಾರಕವನ್ನು ರಕ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.