ADVERTISEMENT

ಬಸ್‌ ಕಾರ್ಯಾಚರಣೆಗೆ ಅಡ್ಡಿ; ಐವರ ಬಂಧನ, ಆರು ಸಿಬ್ಬಂದಿ ವರ್ಗಾವಣೆ

ಐದು ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ: 370 ಚಾಲಕ, ನಿರ್ವಾಹಕರು ಕೆಲಸಕ್ಕೆ ಹಾಜರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 14:19 IST
Last Updated 11 ಏಪ್ರಿಲ್ 2021, 14:19 IST
ವಿಜಯಪುರದಿಂದ ಶ್ರೀಶೈಲಕ್ಕೆ ತೆರಳಿರುವ ಸಾರಿಗೆ ಬಸ್‌ಗಳೊಂದಿಗೆ ಸಿಬ್ಬಂದಿ
ವಿಜಯಪುರದಿಂದ ಶ್ರೀಶೈಲಕ್ಕೆ ತೆರಳಿರುವ ಸಾರಿಗೆ ಬಸ್‌ಗಳೊಂದಿಗೆ ಸಿಬ್ಬಂದಿ   

ವಿಜಯಪುರ: ಬಸ್‌ ಕಾರ್ಯಾಚರಣೆಗೆ ಅಡೆತಡೆ ಒಡ್ಡಿದ ಆರೋಪದ ಮೇರೆಗೆ ತಾಳಿಕೋಟೆ ಡಿಪೊಕ್ಕೆ ಸೇರಿದ ಇಬ್ಬರು, ಮಂಗಳೂರು(ದ.ಕ) ಮತ್ತು ಸಿಂದಗಿ ಡಿಪೊಗೆ ಸೇರಿದ ತಲಾ ಒಬ್ಬರು ಸೇರಿದಂತೆ ಐವರು ಸಿಬ್ಬಂದಿ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮುಷ್ಕರ ನಿರತ ವಿಜಯಪುರದ 1, 2 ಮತ್ತು 3ನೇಡಿಪೊಕ್ಕೆ ಸೇರಿದ ಎರಡು ಜನ ಮೆಕಾನಿಕಲ್‌ ಹಾಗೂ ನಾಲ್ಕು ಜನ ಚಾಲಕ, ನಿರ್ವಾಹಕರನ್ನು ಬಾಲ್ಕಿ, ಕಲಬುರ್ಗಿ, ಮಾನ್ವಿ ಮತ್ತು ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ.

ಕಠಿಣ ಕ್ರಮ ಇಂದು

ADVERTISEMENT

‘ಸೋಮವಾರ ಬೆಳಿಗ್ಗೆ 10 ಗಂಟೆ ಒಳಗಾಗಿ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಎಚ್ಚರಿಕೆ ನೀಡಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಅಧಿಕಾರಿ ವರ್ಗ ಮುಷ್ಕರ ನಿರತ ನೌಕರರ ಮನೆ,ಮನೆಗೆ ಭೇಟಿ ನೀಡಿ ಮನವೊಲಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದೇವೆ. ಈಗಾಗಲೇ ಮನವಿಗೆ ಸ್ಪಂದಿಸಿ ಸುಮಾರು 370ಕ್ಕೂ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಬಂದಿದ್ದಾರೆ ಎಂದರು.

ಭಾನುವಾರ 90 ಬಸ್ಸುಗಳನ್ನು ಆಂಧ್ರಪ್ರದೇಶದ ಶ್ರೀಶೈಲಕ್ಕೆ ಕಳುಹಿಸಲಾಗಿದೆ. ಶ್ರೀಶೈಲಕ್ಕೆ ತೆರಳಿರುವ ಜಿಲ್ಲೆಯ ಪಾದಯಾತ್ರಿಗಳು ತಮ್ಮ ತಮ್ಮ ಊರಿಗೆ ಮರಳು ಅಗತ್ಯ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ, ಕಲಬುರ್ಗಿ ಹಾಗೂ ಜಿಲ್ಲೆಯೊಳಗೆ ಸೇರಿದಂತೆಭಾನುವಾರ ಇಲಾಖೆಯ 65 ಬಸ್ಸುಗಳು ಕಾರ್ಯಾಚರಣೆ ಮಾಡಿದ್ದು, ₹ 10.19 ಲಕ್ಷ ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.

ಕೋರ್ಟ್‌ನಿಂದ ತಡೆಯಾಜ್ಞೆ

ಸಾರಿಗೆ ಸಂಸ್ಥೆಯ ಡಿಪೊ, ವರ್ಕ್‌ಶಾಪ್‌, ಬಸ್‌ ನಿಲ್ದಾಣದ 500 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮುಷ್ಕರ, ಪ್ರತಿಭಟನೆ, ಗುಂಪುಗೂಡದಂತೆ ತಡೆಯಲು ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಇದರನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸ್‌ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ತವ್ಯಕ್ಕೆ ಹಾಜರಾಗಲು ಕಾರ್ಮಿಕ ಮುಖಂಡರೊಂದಿಗೆ ಚರ್ಚೆ ಮಾಡಿದ್ದು, ಸೋಮವಾರದಿಂದಹೆಚ್ಚು ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ನಾಲ್ಕು ದಿನ ಪೂರೈಕೆ

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರಕ್ಕೆ ನಾಲ್ಕು ದಿನ ಪೂರೈಸಿದ್ದು, ಸಾರ್ವಜನಿಕರ ಸಂಚಾರಕ್ಕೆ ವ್ಯತ್ಯಯವಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಒಂದಷ್ಟು ಮಾರ್ಗದಲ್ಲಿ ಸಂಚಾರ ಆರಂಭಿಸಿವೆಯಾದರೂ ಸುಗಮ ಸಂಚಾರ ಸಾಧ್ಯವಾಗಿಲ್ಲ. ಯುಗಾದಿ ಹಬ್ಬಕ್ಕೆ ವಿವಿಧೆಡೆಯಿಂದ ಬಂದು, ಹೋಗಲು ಸಾರ್ವಜನಿಕರಿಗೆ ಅಡಚಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.