ವಿಜಯಪುರ: ಭಾರತೀಯ ಸೇನಾಪಡೆಗೆ ಸೇರ್ಪಡೆಯಾಗಿರುವ ಮುಧೋಳ ನಾಯಿ(ಹೌಂಡ್) ಸೇರಿದಂತೆ ಅತಿ ದುಬಾರಿ ಬೆಲೆಯ ವಿದೇಶಿ ತಳಿಗಳ ಶ್ವಾನಗಳ ಗತ್ತು, ಗಮ್ಮತ್ತಿನ ಪ್ರದರ್ಶನ ಗುಮ್ಮಟನಗರಿಯಲ್ಲಿ ಭಾನುವಾರ ನಡೆಯಿತು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ದೇಶಿ, ವಿದೇಶಿ ತಳಿಗಳ ಶ್ವಾನಗಳು ಎಲ್ಲರ ಗಮನ ಸೆಳೆದವು.
ಸೇಂಟ್ ಬರ್ನರ್ಡ್, ಗ್ರೇಟ್ ಡೇನ್ ನಂತಹ ದೈತ್ಯ ನಾಯಿಗಳು, ಪಮೋರಿಯನ್, ಷಿಟ್ಜುವಿಂತಹ ಪುಟಾಣಿ ನಾಯಿಗಳು, ಗೋಲ್ಡನ್ ರಿಟ್ರಿವರ್‌ನಂತಹ ಮುದ್ದಾದ ನಾಯಿಗಳು ವೇದಿಕೆಯಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದರೆ, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಕೆಲವರು ವಿವಿಧ ವಿನೋದಾವಳಿಗಳಲ್ಲಿ ತಲ್ಲೀನರಾಗಿದ್ದರು. ಇನ್ನು ಕೆಲವರು ತಮ್ಮಿಷ್ಟದ ಖಾದ್ಯಗಳನ್ನು ಸವಿಯುವುದರಲ್ಲಿ ಮಗ್ನರಾಗಿದ್ದರು.
ಇನ್ನೂ ಸೈಬಿರಿಯಾದ ಹಿಮ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ, ಭಾರತೀಯ ತಳಿಗಳ ನಾಯಿಗಿಂತಲೂ ನಾಲ್ಕು ಪಟ್ಟು ಶಕ್ತಿ, ಓಟದ ಸಾಮರ್ಥ್ಯ ಹೊಂದಿರುವ ಸೈಬೇರಿಯನ್ ಹಸ್ಕಿ, ಜರ್ಮನಿಯ ನಾಯಿ ಎಂದಾಗ ಥಟ್ಟನೆ ನೆನಪಿಗೆ ಬರುವ ಜರ್ಮನ್ ಶೆಫರ್ಡ್, ಚೀನಾದ ಚೌಚೌ ಹೀಗೆ 22 ವಿವಿಧ ತಳಿಯ ಒಟ್ಟು 246 ನಾಯಿಗಳು ಎಲ್ಲರನ್ನು ಆಕರ್ಷಿಸಿದವು.
ಶ್ವಾನದ ನಡಿಗೆ, ದೇಹಾಕಾರ, ಹಲ್ಲು ಹಾಗೂ ನಾಯಿಗಳ ವರ್ತನೆ ಆಧಾರದಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ಸುತ್ತಿನ ಸ್ಪರ್ಧೆಯಲ್ಲಿ ನಾಯಿಗಳು ರ್‍ಯಾಂಪ್ ವಾಕ್‌ನಂತೆ ಬಹಳ ನಾಜೂಕಿನ ಹೆಜ್ಜೆ ಹಾಕಿದವು. ಕೆಲವೊಂದು ತಳಿಗಳ ನಾಯಿಗಳು ನೋಡಲಿಕ್ಕೆ ಭಯ ಹುಟ್ಟಿಸುವಂತಿದ್ದರೂ ಬಹಳ ಸ್ನೇಹಮಯಿಯಾಗಿದ್ದವು.
ಸುತ್ತಿನಿಂದ ಸುತ್ತಿಗೆ ಸ್ಪರ್ಧೆ ತೀವ್ರಗೊಂಡಂತೆ ನಾಯಿಗಳ ಪ್ರದರ್ಶನವೂ ಅತ್ಯಾಕರ್ಷಕವಾಗಿತ್ತು. ತಮ್ಮ ಮಾಲೀಕನ, ತರಬೇತುದಾರರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದ ನಾಯಿಗಳ ಪ್ರರ್ದಶನ ಮಾಲೀಕರು, ತರಬೇತುದಾರರಿಗೆ ಮಾತ್ರವಲ್ಲ ನೋಡುಗರಿಗೂ ಉತ್ತೇಜನ ನೀಡುವಂತಿತ್ತು.
ಶ್ವಾನ ಪ್ರದರ್ಶನ ಮೂಲಕ ಜಿಲ್ಲೆಯ ಶ್ವಾನ ಪ್ರಿಯರಿಗೆ ಯುವಕರಿಗೆ ಸ್ವಯಂ ಉದ್ಯೋಗ ಮಾಡಲು ಪ್ರೇರಣೆಯಾಗಲಿದೆ. ಜೊತೆಗೆ ರೆಬಿಸ್ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲಾಗಿದೆ.ಡಾ. ಬಿ.ಎಸ್ ಕನಮಡಿ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಆಡಳಿತ
ವಿಜಯಪುರದಲ್ಲಿ ನಡೆಯುತ್ತಿರುವ ಶ್ವಾನ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಜಿಲ್ಲೆಯಲ್ಲಿ ಈ ರೀತಿ ಶ್ವಾನ ಪ್ರದರ್ಶನ ಆಯೋಜಿಸುತ್ತಿರುವದು ಸಂತಸ ಮೂಡಿಸಿದೆ– ಚೇತನ್ ಚವ್ಹಾಣ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.