ADVERTISEMENT

ವಿಜಯಪುರ | 'ಕೃಷಿ ಭೂಮಿ ಮಾರಾಟ ಮಾಡದರಿ'

ಸಾಳುಂಕೆ ವಸ್ತಿಯ ಬಳಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಮಿಪೂಜೆ: ಎಂ.ಬಿ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:50 IST
Last Updated 16 ಏಪ್ರಿಲ್ 2025, 15:50 IST
ತಿಕೋಟಾ ತಾಲ್ಲೂಕಿನ ಮಲಕನದೇವರಹಟ್ಟಿಯ ಸಾಳುಂಕೆ ವಸ್ತಿಯ ಬಳಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು
ತಿಕೋಟಾ ತಾಲ್ಲೂಕಿನ ಮಲಕನದೇವರಹಟ್ಟಿಯ ಸಾಳುಂಕೆ ವಸ್ತಿಯ ಬಳಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು   

ವಿಜಯಪುರ: ತಿಕೋಟಾ ತಾಲ್ಲೂಕಿನ ಮಲಕನದೇವರಹಟ್ಟಿಯ ಸಾಳುಂಕೆ ವಸ್ತಿಯ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ₹2.50 ಕೋಟಿ ವೆಚ್ಚದಲ್ಲಿ ನಡೆಯಲಿರುವ ಜಿನುಗು ಕೆರೆ ನಿರ್ಮಾಣಕ್ಕೆ (ಸೈಟ್- 2) ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

‘ಈ ಜಿನುಗು ಕೆರೆ 4.73 ಚ.ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದ್ದು, 9 ಎಕರೆ ಪ್ರದೇಶದಲ್ಲಿ 240 ಮೀಟರ್ ಬಂಡ್ ಹೊಂದಿದೆ. 29 ಅಡಿ ಆಳದವರೆಗೆ ಒಟ್ಟು 2.33 ಎಂ.ಸಿ.ಎಫ್.ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಿಂದ 136 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕೂಡ ವೃದ್ಧಿಯಾಗಲಿದೆ. ಈ ಜಿನುಗು ಕೆರೆಗೆ ವರ್ಷದಲ್ಲಿ ಎರಡು ಬಾರಿ ನೀರು ಹರಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ನೀರಾವರಿಯಿಂದಾಗಿ ರೈತರ ಭೂಮಿಗೆ ಭಾರಿ ಬೆಲೆ ಬಂದಿದ್ದು, ಯಾರೂ ಕೃಷಿ ಭೂಮಿ ಮಾರಿಕೊಳ್ಳಬೇಡಿ. ಎಲ್ಲರೂ ಕಾಮಗಾರಿಗೆ ಸಹಕರಿಸಿಬೇಕು. ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣವಾಗಲಿದ್ದು, ಈ ಕೆರೆ ಮತ್ತು ಈ ಮುಂಚೆ ನಿರ್ಮಿಸಲಾಗಿರುವ ಕೆರೆ ಎರಡನ್ನೂ ಒಟ್ಟಿಗೆ ಉದ್ಘಾಟನೆ ಮಾಡಲಾಗುವುದು’ ಎಂದರು.

ADVERTISEMENT

ಗುಣಮಟ್ಡದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ತಬಚಿ- ಬಬಲೇಶ್ವರ ಏತನೀರಾವರಿ ಯೋಜನೆಯಡಿ ನಮಗೆ ಹಂಚಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಎರಡು ಕಡೆ ಸರ್ಕಾರಿ ಜಮೀನಿನಲ್ಲಿ ಹೊಂಡಗಳನ್ನು ನಿರ್ಮಿಸಿ ಅಲ್ಲಿ ಒಂದು ಟಿಎಂಸಿ ಅಡಿ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಜಾರಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ‘ಈ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ವಿಭಾಗ ಅಧಿಕಾರಿ ವಿಶ್ವನಾಥ ಪೀರಶೆಟ್ಟಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ದಯಾನಂದ ಮಠಪತಿ, ಜಲಸಂಪನ್ಮೂಲ ಇಲಾಖೆ ಎಇಇ ಅಂಬಣ್ಣ ಹರಳಯ್ಯ, ತಹಶೀಲ್ದಾರ್‌ ಸುರೇಶ ಚವಲರ, ತಾಲ್ಲೂಕು ಪಂಚಾಯಿತಿ ಇಒ ಬಸವಂತರಾಯ, ಬಿರಾದಾರ, ಬಿಇಒ ಪ್ರಮೋದಿನಿ ಬಳೂಲಮಟ್ಟಿ, ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ವಸ್ತ್ರದ, ಹೆಸ್ಕಾಂ ಎಇಇ ಗೋವಿಂದ ಎಸ್. ದೇಶಮುಖ ಇದ್ದರು.

ರೈತರ ಬಾಳನ್ನು ಹಸನಾಗಿಸಲು ರೂಪಿಸಿರುವ ನೀರಾವರಿ ಯೋಜನೆಗಳಿಂದಾಗಿ ಅನ್ನದಾತರ ಬಂಜರು ಜಮೀನು ಬಂಗಾರದ ಭೂಮಿಯಾಗಿ ಪರಿವರ್ತನೆಯಾಗಿವೆ

-ಎಂ.ಬಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.