ADVERTISEMENT

ಡೋಣಿ ನದಿ ಪುನಶ್ಚೇತನ ಕೂಗು

ದಾರಿ ತಪ್ಪಿದ ಡೋಣಿ ನದಿ ಹರಿವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 9:34 IST
Last Updated 19 ಜೂನ್ 2022, 9:34 IST
ತಾಳಿಕೋಟೆ ಪಟ್ಟಣದಿಂದ ವಿಜಯಪುರ ರಸ್ತೆಯಲ್ಲಿರುವ ಡೋಣಿ ನದಿ ತುಂಬಿ ಹರಿಯುತ್ತಿರುವುದು  (ಪ್ರಜಾವಾಣಿ ಸಂಗ್ರಹ ಚಿತ್ರ) 
ತಾಳಿಕೋಟೆ ಪಟ್ಟಣದಿಂದ ವಿಜಯಪುರ ರಸ್ತೆಯಲ್ಲಿರುವ ಡೋಣಿ ನದಿ ತುಂಬಿ ಹರಿಯುತ್ತಿರುವುದು  (ಪ್ರಜಾವಾಣಿ ಸಂಗ್ರಹ ಚಿತ್ರ)    

ವಿಜಯಪುರ: ಕೃಷ್ಣೆ, ಭೀಮೆ ಮತ್ತು ಡೋಣಿ ನದಿಗಳು ಜಿಲ್ಲೆಯ ಉದ್ದಗಲದಲ್ಲಿ ಹರಿಯುತ್ತಿರುವ ಪರಿಣಾಮ ಸಾಕಷ್ಟು ಸಮೃದ್ಧವಾಗಿದೆ. ಜೊತೆಗೆ ಪ್ರತಿ ವರ್ಷ ಈ ನದಿಗಳು ಸಂಕಷ್ಟ ತಂದೊಡ್ಡುವ ಮೂಲಕ ಜನರನ್ನು ತೊಂದರೆಗೂ ಸಿಲುಕಿಸುತ್ತಿವೆ.

ಕೃಷ್ಣಾ, ಭೀಮಾ ನದಿಗಳಿಗಿಂತ ಡೋಣಿ ನದಿ ಏಕಾಏಕಿ ತಂದೊಡ್ಡುವ ಪ್ರವಾಹ ನದಿ ತೀರದ ರೈತ ಸಮುದಾಯವನ್ನು ಪ್ರತಿ ವರ್ಷ ಇನ್ನಿಲ್ಲದಂತೆ ತೊಂದರೆಗೆ ಸಿಲುಕಿಸುತ್ತದೆ. ಡೋಣಿ ನದಿಯಲ್ಲಿ ನೀರು ಹರಿದಿರುವುದಕ್ಕಿಂತ ರೈತರ ಕಣ್ಣಲ್ಲಿ ನೀರು ಹರಿದಿರುವುದೇ ಹೆಚ್ಚು.‌ ಈ ಕಾರಣಕ್ಕೆ ‘ದೋಣಿ ಹರಿದರೆ ಓಣಿಯೆಲ್ಲ ಕಾಳು’ ಎಂಬ ಮಾತು ಸುಳ್ಳಾಗಿ, ‘ಡೋಣಿ ಹರಿದರೆ ರೈತರ ಬಾಳೇ ಗೋಳು’ ಎನ್ನುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ.

ವರ್ಷದ ಮುಕ್ಕಾಲು ಭಾಗ ಒಣಗಿರುವ ಡೋಣಿ ನದಿಯು ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ಭಾರಿ ರಾಜಾವೇಶದಿಂದ ಉಕ್ಕಿ ಹರಿಯುತ್ತದೆ.ದೋಣಿ ನದಿ ತನ್ನ ದಿಕ್ಕನ್ನು ನಿರಂತರವಾಗಿ ಬದಲಾಯಿಸುತ್ತಿರುತ್ತದೆ.ಪ್ರವಾಹದ ಸಮಯದಲ್ಲಿ ಡೋಣಿ ತನ್ನ ನದಿಪಾತ್ರ ಬಿಟ್ಟು ತನ್ನ ಎಡಬಲಗಳ ಫಲವತ್ತಾದ ಮಣ್ಣು, ಬೆಳೆಗಳನ್ನು ಆಪೋಶನ ಮಾಡಿದ್ದೆ ಹೆಚ್ಚು. ಪ್ರವಾಹದ ವೇಳೆ ನದಿಯಲ್ಲಿ ನೀರು ಹರಿಯುವ ಬದಲು ಹುಚ್ಚೆದ್ದು ಅಕ್ಕಪಕ್ಕದ ಹೊಲಗಳಲ್ಲಿ ಹರಿಯುವ ಪರಿಣಾಮ ‘ದಾರಿ ತಪ್ಪಿದ ನದಿ’ ಎಂದೇ ಕುಖ್ಯಾತಿಯಾಗಿದೆ.

ADVERTISEMENT

ಡೋಣಿ ನದಿಗೆ ಆಳದ ನದಿಪಾತ್ರವಿಲ್ಲ. ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಈ ಕಪ್ಪುಮಣ್ಣಿಗೆ ಕಡಿಮೆ ಇರುವುದರಿಂದ ಮಳೆಗಾಲದಲ್ಲಿ ಜೋರಾಗಿ ಮಳೆಯಾದರೆ ಪ್ರವಾಹ ಹೆಚ್ಚುತ್ತದೆ. ಜೊತೆಗೆ ಹೆಚ್ಚು ತಿರುವುಗಳಿಂದ ಕೂಡಿದೆ. ಇದರಿಂದಾಗಿ ಎಡಬಲದ ಜಮೀನುಗಳ ಮಣ್ಣು, ಪೈರು ಕೊಚ್ಚಿಹೋಗಿ ಇನ್ನೆಲ್ಲೋ ಸುರಿಯುತ್ತದೆ.

ನದಿ ಹರಿವಿನ ಪ್ರದೇಶದಲ್ಲಿ ಬಳ್ಳಾರಿ ಜಾಲಿ ಗಿಡಗಳು ಯಥೇಚ್ಛವಾಗಿ ಬೆಳೆದು ನಿಂತಿರುವುದರಿಂದ ನೀರು ಸರಾಗವಾಗಿ ಹರಿಯದೇ ಅಡ್ಡಾದಿಡ್ಡಿ ಹರಿಯುತ್ತಿದೆ. ಜೊತೆಗೆ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳು ಅವೈಜ್ಞಾನಿಕವಾಗಿರುವ ಪರಿಣಾಮವೂ ನೀರು ಸರಾಗವಾಗಿ ಹರಿಯಲಾಗದೇ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂಬ ಆರೋಪವೂ ಇದೆ. ಅಲ್ಲದೇ, ನದಿ ತೀರ ಪ್ರದೇಶವನ್ನು ರೈತರು ಒತ್ತುವರಿ ಮಾಡಿ ಬೇಸಾಯ ಮಾಡುತ್ತಿರುವ ಪರಿಣಾಮವೂ ನದಿ ಪಾತ್ರ ಬದಲಾಗಿದೆ.

ಡೋಣಿ ನದಿ ದಂಡೆಯಲ್ಲಿ ಬೆಳೆದುನಿಂತಿರುವ ಜಾಲಿಗಿಡಗಳನ್ನು ತೆಗೆದುಹಾಕುವುದರಿಂದ ಅದರ ಅಪಾಯದ ಪ್ರಮಾಣ ಕಡಿಮೆ ಮಾಡಬಹುದು ಎಂಬುದು ಕೆಲ ರೈತರ ಅನಿಸಿಕೆಯಾಗಿದ್ದರೂ, ಈ ಜಾಲಿಗಿಡಗಳೇ ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದರಿಂದ ಹೆಚ್ಚಿನ ಮಣ್ಣು ಕೊಚ್ಚಿ ಹೋಗುವ ಅಪಾಯ ತಡೆದಿದೆ ಎಂಬ ವಾದವೂ ಇದೆ.

2009ರಲ್ಲಿ ನದಿ ಉಕ್ಕಿ ಹರಿದ ಪರಿಣಾಮ ವಿಜಯಪುರ ಜಿಲ್ಲೆಯ ಸುಮಾರು 36 ಹಳ್ಳಿಗಳು ಪ್ರವಾಹದಿಂದ ತೀವ್ರ ತೊಂದರೆಗೆ ಒಳಪಟ್ಟಿದ್ದವು. ರಾಜ್ಯ ಸರ್ಕಾರವು ದೋಣಿ ನದಿಯ ಪ್ರವಾಹದಿಂದ ಪ್ರತಿವರ್ಷವೂ ತೊಂದರೆಗೆ ಒಳಪಡುವ ಜಿಲ್ಲೆಯ 9 ಹಳ್ಳಿಗಳನ್ನು ಕಾಯಂ ಆಗಿ ಸ್ಥಳಾಂತರಿಸಲುಕ್ರಮ ತೆಗೆದುಕೊಂಡಿದೆ. ಆದಾಗ್ಯೂ ನದಿಯಲ್ಲಿ ಪ್ರವಾಹದ ಭೀತಿ, ಪ್ರವಾಹದಲ್ಲಿ ಸಾವಿರಾರು ಎಕರೆ ಬೆಳೆದು ನಿಂತ ಪೈರುಗಳು ಕೊಚ್ಚಿಕೊಂಡು ಹೋಗುವ ಭೀತಿ ಇನ್ನೂ ಇದ್ದೆ ಇದೆ.

ಪಥವನ್ನು ಬದಲಿರುವ ಡೋಣಿ ನದಿಯನ್ನು ಪುನಶ್ಚೇತನ ಮಾಡಬೇಕು ಎಂಬ ಕೂಗು ವರ್ಷದಿಂದ ವರ್ಷಕ್ಕೆ ಮಾರ್ದನಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರಾದ ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೇಂದ್ರ ಸರ್ಕಾರ ಸ್ವಾಮ್ಯದ ವ್ಯಾಪಕೋ ಸಂಸ್ಥೆ ಡೋಣಿ ನದಿಯನ್ನು ಸರ್ವೇ ಮಾಡಿ, ವರದಿ ಪಡೆಯಲಾಗಿತ್ತು.ಈ ವರದಿ ಅದರನ್ವಯ ಅಪಾರ ಮೊತ್ತದ ಯೋಜನೆಯ ಪ್ರಸ್ತಾವನೆ ವೆಚ್ಚದಾಯಕವಾಗಿರುವ ಕಾರಣ ಪ್ರವಾಹ ನಿಯಂತ್ರಣ ಯೋಜನೆಯಡಿ ಹಣ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಲಾಗಿತ್ತು. ಪ್ರಸ್ತಾವನೆ ಕೇಂದ್ರದಲ್ಲಿಯೇ ಬಾಕಿ ಉಳಿದಿದೆ.

ನದಿ ಪುನಶ್ಚೇತನ ಸಂಬಂಧವಿಜಯಪುರದ ಜಲ ಬಿರಾದಾರಿ ಸಂಸ್ಥೆಯ ಅಧ್ಯಕ್ಷ ಪೀಟರ್‌ ಅಲೆಕ್ಝಾಂಡರ್‌ ಅವರ ನೇತೃತ್ವದಲ್ಲಿ ನದಿ ತೀರದ ಗ್ರಾಮಗಳಲ್ಲಿ ಜನಜಾಗೃತಿ, ಸಂಘಟನೆ ಸದ್ಯ ನಡೆದಿದೆ.

ಜಲ ಬಿರಾದರಿ ಸಂಘಟನೆ ಆಹ್ವಾನದ ಮೇರೆಗೆ ರಾಜಸ್ತಾನದ ಜಲತಜ್ಞ ಡಾ. ರಾಜೇಂದ್ರ ಸಿಂಗ್‌ ಅವರು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿ, ಪುನಶ್ಚೇತನ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಹೊನಗನಹಳ್ಳಿಯ ಹತ್ತಿರ ಡೋಣಿ ನದಿಯನ್ನು ಪರಿಶೀಲಿಸಿದರಾಜೇಂದ್ರಸಿಂಗ್ ಅವರು, ಡೋಣಿ ಪ್ರವಾಹಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಶಾಸಕ ಎಂ.ಬಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರೊಂದಿಗೆ ಮಾತುಕತೆ ನಡೆಸಿ,ನದಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಹೂಳು ತೆಗೆದು, ಸ್ವಚ್ಛಗೊಳಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನೊಂದೆಡೆ ತಾಳಿಕೋಟೆಯಖಾಸ್ಗತೇಶ್ವರಮಠದ ಸಿದ್ಧಲಿಂಗದೇವರ ನೇತೃತ್ವದಲ್ಲಿ ಡೋಣಿ ಸಂರಕ್ಷಣಾ ಸಮಿತಿ ರಚನೆ ಮಾಡಿಕೊಳ್ಳಲಾಗಿದೆ. ಈ ಸಮಿತಿಯು ಈ ಹಿಂದೆ ಡೋಣಿಯ ಇಕ್ಕೆಲದಲ್ಲಿನ ಮುಳ್ಳುಕಂಟಿ ತೆಗೆಸಿದ ನಂತರ ಡೋಣಿ ನದಿ ಪಾತ್ರ ಆಳ ಮಾಡಿಸಲು ಅದರೊಳಗಿನ ಮಣ್ಣು ತೆಗೆಸಲು ಅನುಮತಿಗಾಗಿ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಲಾಗಿದೆ.

ಜಿಲ್ಲೆಯಾದ್ಯಂತ ದೋಣಿ ನದಿ ಪುನಶ್ಚೇನ ಕೂಗು ನಿಧಾನವಾಗಿ ಮಾರ್ದನಿಸತೊಡಗಿದ್ದು, ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ.

****

ಡೋಣಿ ಪ್ರವಾಹ ನಿಯಂತ್ರಣಕ್ಕೆ ಡಾ.ಸಜ್ಜನ ಸಲಹೆ

ಆಲಮಟ್ಟಿ ಕೆಬಿಜಿಎನ್‌ಎಲ್‌ನ ತಾಂತ್ರಿಕ ಸಹಾಯಕ ಡಾ.ಸುಧೀರ ಸಜ್ಜನ ಅವರು ‘ದೋಣಿ ನದಿ ಪ್ರವಾಹ-ಒಂದು ವೈಜ್ಞಾನಿಕ ಪ್ರಸ್ತಾವನೆ‘ ಎಂಬ ತಮ್ಮ ಅಧ್ಯಯನ ವರದಿಯಲ್ಲಿದೋಣಿ ನದಿ ಪ್ರವಾಹ ನಿಯಂತ್ರಣ ಸಂಬಂಧ ಮಹತ್ವದ ಶಿಫಾರಸು ಮಾಡಿದ್ದಾರೆ.

ಡೋಣಿ ನದಿ ತಿರುವುಗಳನ್ನು ನೇರಗೊಳಿಸುವುದು ಹಾಗೂ ನದಿ ಪ್ರವಾಹವನ್ನು ಪಕ್ಕದ ಕಣಿವೆಗಳಿಗೆ ತಿರುವುದು. ಈ ಸಂಬಂಧಮೂರು ಕ್ರಮಗಳನ್ನು ಯೋಜಿಸಬಹುದಾಗಿದೆ ಎಂದು ಸೂಚಿಸಿದ್ದಾರೆ.

ಸಾರವಾಡ ಡೈವರ್ಸನ್‌:

ಸಾರವಾಡ ಹಾಗೂ ಕಾಕಂಡಕಿ ಗ್ರಾಮಗಳ ಮಧ್ಯೆ ಸುಮಾರು 6 ಕಿ.ಮೀ ಉದ್ದದ ಸುರಂಗಮಾರ್ಗ ಕೊರೆದು ಪ್ರವಾಹದ ನೀರನ್ನು ಮಮದಾಪೂರ ಕೆರೆಯ ಮೂಲಕ ಪಕ್ಕದ ಕೃಷ್ಣಾ ನದಿಗೆ ತಿರುವುವ ಯೋಜನೆಯಾಗಿದೆ. ಇದಕ್ಕೆ ಸುಮಾರು ₹50 ಕೋಟಿಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಸಾತಿಹಾಳ ಡೈವರ್ಸನ್‌:

ಸಾತಿಹಾಳ ಹತ್ತಿರ ದೋಣಿ ನದಿ ಪ್ರವಾಹದ ನೀರನ್ನು ಪಕ್ಕದ ಭೀಮಾ ಕಣಿವೆಯ ದೇವೂರ ಹಾಗೂ ರಾಮನಹಳ್ಳಿ ಕೆರೆಗಳಿಗೆ ಆ ನಂತರ ಭೀಮಾ ನದಿಗೆ ತಿರುವುವ ಯೋಜನೆಯಾದೆ. ಈ ಯೋಜನೆಯು 3 ಕಿ.ಮೀ. ಸುರಂಗ ಮಾರ್ಗ ನಿರ್ಮಾಣದ ಕಾಮಗಾರಿ ಒಳಗೊಂಡಿರುತ್ತದೆ. ಇದಕ್ಕೆ ಸುಮಾರು ₹45 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

ತಾಳಿಕೋಟ ಪ್ಲಡ್‌ವೇ:

ತಾಳಿಕೋಟೆಯ ಹತ್ತಿರ ದೋಣಿ ನದಿಯು ಒಂದು ದೊಡ್ಡ ತಿರುವನ್ನು ಪಡೆಯುತ್ತಿದ್ದು, ಸಣ್ಣ ಪ್ರವಾಹ ಬಂದರೂ ನೀರು ಹಿಂದೆ ಸರಿದು ಪಕ್ಕದ ಜಮೀನುಗಳಿಗೆ ನುಗ್ಗುತ್ತದೆ. ಕೇವಲ 2 ಕಿ.ಮೀ ಉದ್ದದ ಪ್ಲಡ್‌ವೇ ಅಂದರೆ ಒಂದು ಕಾಲುವೆಯ ಮೂಲಕ ಮೇಲಿನ ತಿರುವನ್ನು ಹೋಗಲಾಡಿಸಿ ನದಿಯನ್ನು ನೇರಗೊಳಿಸಬಹುದಾಗಿದೆ. ಇದರ ನಿರ್ಮಾಣದ ಖರ್ಚು ಸುಮಾರು ₹ 15 ಕೋಟಿ ಎಂದು ಅಂದಾಜಿಸಲಾಗಿದೆ.

ದೋಣಿ ನದಿಯಲ್ಲಿ ಪ್ರವಾಹವನ್ನು ಸಂಪೂರ್ಣ ಅಳಿಸಿ ಹಾಕಲು ಮೇಲಿನ ಮೂರು ಕ್ರಮಗಳ ಜೊತೆಗೆ, ಇನ್ನೂ ಕೆಲವು ಸಣ್ಣ ಪ್ರಮಾಣದ ಕ್ರಮಗಳನ್ನು ರೂಪಿಸುವುದು ಅವಶ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಾಳು ಬಿದ್ದ ತಡೆಗೋಡೆ ತೆಗೆದುಹಾಕುವುದು:

ಇತ್ತೀಚೆಗೆ ನದಿಗೆ ಅಡ್ಡಲಾಗಿ ಅನೇಕ ಎತ್ತರ ಮಟ್ಟದ ಸೇತುವೆಗಳನ್ನು ನಿರ್ಮೀಸಲಾಗಿದೆ. ಆದರೆ, ಅವುಗಳಿಗೆ ಹೊಂದಿ ಆ ಮೊದಲು ಇದ್ದ ಕೆಳ ಮಟ್ಟದ ಸೇತುವೆಗಳು, ಅವುಗಳು ನಿರುಪಯುಕ್ತವಾಗಿದ್ದರೂ ಅವುಗಳನ್ನುತೆಗೆದುಹಾಕಿರುವುದಿಲ್ಲ. ಅವುಗಳ ವೆಂಟ್‌ಗಳಲ್ಲಿ ಹೂಳು, ಗಿಡ-ಕಂಟಿಗಳು ತುಂಬಿ ಮುಚ್ಚಿಹೋಗಿರುತ್ತವೆ. ಇದರಿಂದಾಗಿ, ಪ್ರವಾಹದ ನೀರು ಅವುಗಳ ವೆಂಟ್‌ಗಳ ಮೂಲಕ ಹಾಯದೇ ಅವುಗಳ ಮೇಲೆ ಹಾಯ್ದು ಹೋಗುತ್ತಿದೆ. ಇವುಗಳು ಒಂದು ರೀತಿ ತಡೆಗೋಡೆ ನಿರ್ಮಿಸಿದಂತಾಗಿದ್ದು, ಅವುಗಳಿಂದ ನೀರು ಹಿಂದೆ ಸರಿದು ಪ್ರವಾಹ ಸೃಷ್ಟಿಸುತ್ತಿವೆ.

ಉದಾಹರಣೆಗೆ, ಹಿಟ್ಟನಹಳ್ಳಿ ಹಾಗೂ ತಾಳಿಕೋಟೆಯ ಹತ್ತಿರ ಹೊಸ ಸೇತುವೆಗಳ ಪಕ್ಕ ಅಂತಹ ಎರಡು ಕೆಳಮಟ್ಟದ ಸೇತುವೆಗಳಿದ್ದು, ಅವುಗಳು ನದಿಯಲ್ಲಿ ಪ್ರವಾಹವನ್ನು ಇನ್ನೂ ಹೆಚ್ಚಿಸಲು ಕಾರಣಗಳಾಗಿವೆ.

ಸ್ಟ್ರೀಮ್‌ ಚನಲಾಜೇಷನ್:

ನದಿಯಲ್ಲಿ ಈಗಾಗಲೇ ಸಂಗ್ರಹವಾದ ಹೂಳು ಹಾಗೂ ಗಿಡಗಂಟಿಗಳನ್ನು ತೆಗೆದು ನೀರು ಹರಿಯಲು ಒಂದು ಸ್ಪಷ್ಟ ದಾರಿಯನ್ನು ಕಲ್ಪಿಸುವುದು ಅವಶ್ಯವಿರುತ್ತದೆ. ಅದರೊಂದಿಗೆ ಪಕ್ಕದ ಗಿಡ-ಗಂಟಿಗಳನ್ನು ಕಡಿಯುವುದು, ಎಲ್ಲಿ ಸಾಧ್ಯವೋ ಅಲ್ಲಿ ನದಿ ದಾರಿಯನ್ನು ನೇರಗೊಳಿಸುವುದು, ಅವಶ್ಯಕತೆ ಇದ್ದಲ್ಲಿ ಅಗಲಗೊಳಿಸುವುದು, ಆಳಗೊಳಿಸುವುದು, ಪಿಚ್ಚಿಂಗ್ ಮಾಡುವುದು ಇತ್ಯಾದಿ ಕ್ರಮಗಳನ್ನು ಸ್ಟ್ರೀಮ್‌ ಚನಲಾಜೇಷನ್ ಒಳಗೊಂಡಿರುತ್ತದೆ. ಇದಕ್ಕೆ ಸುಮಾರು ₹32ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

***

ಕೃಷ್ಣೆಯ ಉಪ ನದಿ ಡೋಣಿ

ದೋಣಿ ನದಿ ಹರಿವು ತುಂಬಾ ಚಿಕ್ಕದು.ಮಹಾರಾಷ್ಟ್ರದ ಜತ್ ತಾಲ್ಲೂಕಿನ ಖೋಜನವಾಡಿ ಗ್ರಾಮದ ಹತ್ತಿರ ಉಗಮಿಸುವ ಈ ನದಿ ಬೆಳಗಾವಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 194 ಕಿ.ಮೀ. ಸಾಗಿ ನಾರಾಯಣಪುರ ಅಣೆಕಟ್ಟೆ ಸಮೀಪ ಕೋಡೆಕಲ್‌ ಹತ್ತಿರ ಕೃಷ್ಣಾ ನದಿಯನ್ನು ಸೇರ್ಪಡೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಕೇವಲ 15 ಕಿ.ಮೀ. ಹರಿಯುತ್ತದೆ. ಉಳಿದಂತೆ 179 ಕಿ.ಮೀ. ಕರ್ನಾಟಕದಲ್ಲಿ ಹರಿಯುತ್ತದೆ.

***

ಡೋಣಿ ನದಿ ಪಾತ್ರದಲ್ಲಿ ತುಂಬಿರುವ ಹೂಳು, ಜಾಲಿ ಕಂಟಿ, ಅವೈಜ್ಞಾನಿಕ ಸೇತುವೆಗಳ ಬಗ್ಗೆ ಸೆಟಲೈಟ್‌ ಸರ್ವೇ ಆಗಬೇಕು. ಡೋಣಿಯು ಕೃಷ್ಣೆಯ ಉಪ ನದಿಯಾಗಿರುವುದರಿಂದ ಇದ ಪುನಶ್ಚೇತನ ಕಾರ್ಯವನ್ನು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ವಹಿಸಬೇಕು. ದೋಣಿ ನದಿ ಪ್ರವಾಹ ನಿಯಂತ್ರಣ ಪ್ರಾಧಿಕಾರ ರಚಿಸಬೇಕು
– ಪೀಟರ್ ಅಲೆಕ್ಸಾಂಡರ್, ಅಧ್ಯಕ್ಷ, ಜಲ ಬಿರಾದರಿ ಸಂಘಟನೆ, ವಿಜಯಪುರ

***

ಡೋಣಿ ನದಿ ನಮ್ಮ ಜಿಲ್ಲೆಯಲ್ಲಿ ಹರಿದಿರುವುದೇ ಭಾಗ್ಯ. ಅದು ರೈತರ ಜೀವನಾಡಿ ಆಗಿದೆ. ನಾಡಿಗೆ ಅನ್ನ ನೀಡುವ ರೈತ ಶ್ರೀಮಂತನಾಗಲು ನೀರು ಒದಗಿಸಬೇಕು. ಅದಕ್ಕಾಗಿ ಡೋಣಿ ನದಿ ಸಂರಕ್ಷಣೆಯಾಗಬೇಕು. ಅದರಿಂದ ರೈತರಿಗಾಗುವ ಹಾನಿ ತಪ್ಪಬೇಕು.
–ಸಿದ್ಧಲಿಂಗದೇವರು, ಪೀಠಾಧಿಪತಿ, ಶ್ರೀ ಖಾಸ್ಗತೇಶ್ವರಮಠ, ತಾಳಿಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.