ADVERTISEMENT

ಪ್ರವಾಸೋದ್ಯಮದಿಂದ ಉದ್ಯೋಗ, ಆದಾಯ: ಎಂ.ಬಿ. ಪಾಟೀಲ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 13:55 IST
Last Updated 15 ಆಗಸ್ಟ್ 2024, 13:55 IST
ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನೆಕ್ಟ್–2024ರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಾಲನೆ ನೀಡಿದರು
ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನೆಕ್ಟ್–2024ರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಾಲನೆ ನೀಡಿದರು   

ವಿಜಯಪುರ: ‘ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಐತಿಹಾಸಿಕ ಪ್ರವಾಸಿ ಸ್ಥಳಗಳ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು ಆದಾಯ ವೃದ್ಧಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನೆಕ್ಟ್–2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿನ ಸ್ಮಾರಕಗಳು, ಐತಿಹಾಸಿಕ ವಾಸ್ತುಶಿಲ್ಪಗಳು, ಪ್ರವಾಸಿ ತಾಣಗಳಲ್ಲಿ ಹೊರ ರಾಜ್ಯ ಮತ್ತು ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮೂಲ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹಲವು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರವಾಸಿಗರ ಗಮನ ಸೆಳೆಯಲು ಜಿಲ್ಲೆಯ ತಾಣಗಳ ಕುರಿತು ಸೂಕ್ತ ಪ್ರಚಾರ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ‘ವಿದೇಶಿ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಪ್ರವಾಸಿ ತಾಣ, ಸ್ಮಾರಕಗಳ ಐತಿಹಾಸಿಕ ಮಹತ್ವ ಸಾರಲು, ಸ್ಮಾರಕಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಅವುಗಳ ನಿರ್ವಹಣೆ ಮಾಡುವತ್ತ ಕ್ರಮವಹಿಸಲಾಗುತ್ತಿದೆ’ ಎಂದರು.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ‘ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹಲವು ಅವಕಾಶಗಳಿದ್ದು, ಮಹಿಳೆಯರು ಕೂಡ ಯಾವುದೇ ಭಯವಿಲ್ಲದೇ ಪ್ರವಾಸ ಕೈಗೊಳ್ಳುವಂತೆ ಮಾಡುವಲ್ಲಿ ಸುರಕ್ಷಿತ ಹಾಗೂ ಭಯಮುಕ್ತ ವಾತಾವರಣ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯವಾಗಿ ದೊರೆಯುವ ಆಹಾರ, ಕರಕುಶಲ ಕಲೆ, ಉಡುಗೆ ತೊಡುಗೆಗಳ, ಸಂಸ್ಕೃತಿಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕು’ ಎಂದು ಹೇಳಿದರು.

ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯದರ್ಶಿ ಮನು ಪ್ರಾಸ್ತಾವಿಕ ಮಾತನಾಡಿದರು. ಹೊಟೇಲ್ ಉದ್ಯಮದಾರರು, ಟ್ರಾವೆಲ್ ಎಜೆನ್ಸಿಯ ಸದಸ್ಯರ ಜೊತೆ ಸಂವಾದ ನಡೆಯಿತು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ಹಣಾಧಿಕಾರಿ ರಿಷಿ ಆನಂದ, ವಿಜಯಪುರ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಬಾಗಲಕೊಟೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಗೋಪಾಲ ಹಿತ್ತಿಲಮನಿ, ಕೆಎಸ್‍ಆರ್‌ಟಿಸಿ ಡಿ.ಸಿ ನಾರಾಯಣ ಕುರುಬರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.