ADVERTISEMENT

ದೇವರಹಿಪ್ಪರಗಿ: ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 4:34 IST
Last Updated 6 ಡಿಸೆಂಬರ್ 2025, 4:34 IST
ದೇವರಹಿಪ್ಪರಗಿ ಪಟ್ಟಣದಲ್ಲಿ ಪಾದಚಾರಿ ರಸ್ತೆ ಅತಿಕ್ರಮಿಸಿದ ಗೂಡಂಗಡಿ ಹಾಗೂ ವ್ಯಾಪಾರ ಮಳಿಗೆಗಳನ್ನು ಪಟ್ಟಣ ಪಂಚಾಯಿತಿಯಿಂದ ತೆರವುಗೊಳಿಸಲಾಯಿತು
ದೇವರಹಿಪ್ಪರಗಿ ಪಟ್ಟಣದಲ್ಲಿ ಪಾದಚಾರಿ ರಸ್ತೆ ಅತಿಕ್ರಮಿಸಿದ ಗೂಡಂಗಡಿ ಹಾಗೂ ವ್ಯಾಪಾರ ಮಳಿಗೆಗಳನ್ನು ಪಟ್ಟಣ ಪಂಚಾಯಿತಿಯಿಂದ ತೆರವುಗೊಳಿಸಲಾಯಿತು   

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿಯು ಸುರಕ್ಷತೆಗಾಗಿ ಪಟ್ಟಣದ ಪ್ರಮುಖ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿತು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಗುರುವಾರ ಮೋಹರೆ ಹಣಮಂತ್ರಾಯ ವೃತ್ತದಿಂದ ಅಂಬೇಡ್ಕರ್‌ ವೃತ್ತದ ವರೆಗೆ ಹಾಗೂ ಹೊಸನಗರದ ಸರ್ಕಾರಿ ಆಸ್ಪತ್ರೆಯಿಂದ ಮೊಹರೆ ಹಣಮಂತ್ರಾಯ ವೃತ್ತದವರೆ ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಪ್ರಾರಂಭವಾದ ಕಾರ್ಯಾಚರಣೆ ಅಪರಾಹ್ನದವರೆಗೆ ಜರುಗಿತು. ತೆರವು ಕಾರ್ಯಕ್ಕೆ ಸಿಬ್ಬಂದಿ ಪೊಲೀಸರ ಸಹಾಯ ಪಡೆದು ಜೆ.ಸಿ.ಬಿ ಮೂಲಕ ತೆರವು ಕಾರ್ಯಚರಣೆ ನಡೆಸಿದರು. ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು ಸ್ಥಳದಲ್ಲಿ ಜಮಾಯಿಸಿ ಕಾರ್ಯಾಚರಣೆಗೆ ಸಹಕಾರ ನೀಡಿದರು.

ADVERTISEMENT

ಏಕಾಏಕಿ ಕಾರ್ಯಾಚರಣೆಯಿಂದ ನಮಗೆ ನಷ್ಟವಾಗಿದ್ದು ವ್ಯಾಪಾರಕ್ಕೆ ಹಿನ್ನಡೆಯಾಗಿದೆ ಎಂದು ಸ್ಥಳೀಯ ವ್ಯಾಪಾರಿ ಆಯೂಬ್ ಬೇಪಾರಿ ಸಹಿತ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಅತಿಕ್ರಮಣಗಳಿಂದಾಗಿ ಪಾದಚಾರಿ ಮಾರ್ಗಗಳು ಪೂರ್ಣವಾಗಿ ಕಣ್ಮರೆಯಾಗಿದ್ದವು. ಸಾರ್ವಜನಿಕರು ರಸ್ತೆಯ ಮೇಲೆಯೇ ನಡೆಯಬೇಕಾಗಿದ್ದರಿಂದ ಅಪಘಾತದ ಅಪಾಯ ಹೆಚ್ಚಾಗಿತ್ತು. ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಡಿ. 4ರಂದು ಜರುಗಿದ ಸಾಮಾನ್ಯ ಸಭೆಯಲ್ಲಿ ರಸ್ತೆ ಅತಿಕ್ರಮಣ ತೆರವುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಎಲ್ಲರಿರೂ ನಾಲ್ಕು ದಿನ ಮುಂಚಿತವಾಗಿ ತಿಳಿಸಲಾಗಿತ್ತು ಎಂದು ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲ ತಿಳಿಸಿದರು.

ಕಾರ್ಯಾಚರಣೆ ಕೈಗೊಂಡಿದ್ದು ಸಮಯೋಚಿತ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.