ADVERTISEMENT

ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ ಅಧಿಕಾರಿಯ ಕಾರಿಗೆ ಕಲ್ಲು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 10:56 IST
Last Updated 27 ಆಗಸ್ಟ್ 2019, 10:56 IST
   

ವಿಜಯಪುರ: ಇಲ್ಲಿಯ ಗಾಂಧಿ ನಗರದಲ್ಲಿರುವ ಡೈಮಂಡ್ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಕಲು ಮಾಡುತ್ತಿದ್ದ 10 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಿದ ಫ್ಲೈಯಿಂಗ್ ಸ್ಕಾಡ್ ಅಧಿಕಾರಿ ಡಾ.ವೈ.ಕೆ.ಹೂಗಾರ ಅವರ ಕಾರಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ.

ಬೆಳಿಗ್ಗೆ 9.30 ರಿಂದ 12.30 ಗಂಟೆಯವರೆಗೆ ಅರೆ ವೈದ್ಯಕೀಯ ಕೋರ್ಸ್‌ಗಳ ಪರೀಕ್ಷೆ ನಡೆದಿತ್ತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಡಾ.ಹೂಗಾರ ಅವರು ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು. ಬಳಿಕ ಇನ್ನೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಲೆಂದು ಹೊರಬಂದಾಗ ಕಾರಿನ ಮುಂದಿನ ಗಾಜನ್ನು ಒಡೆದಿರುವುದು ಕಂಡುಬಂದಿದೆ.
‘ಒಂದು ಸರ್ಕಾರಿ ಹಾಗೂ ಮೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದೇನೆ. ಪರೀಕ್ಷಾ ಕೇಂದ್ರದ ಸುತ್ತ 100 ಮೀ. ಯಾರೂ ಇರಬಾರದು ಎಂಬ ನಿಯಮವಿದೆ. ಆದರೆ, ಇಲ್ಲಿ ಬಹಳಷ್ಟು ಜನರು ಇದ್ದರು. ಡಿಬಾರ್ ಆಗಿರುವ ವಿದ್ಯಾರ್ಥಿಗಳೇ ಕಾರಿಗೆ ಕಲ್ಲು ಎಸೆದಿರುವ ಶಂಕೆ ಇದೆ’ ಎಂದು ಡಾ.ವೈ.ಕೆ.ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಗೋಲಗುಂಬಜ್ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿನೋದ ದೊಡ್ಡಮನಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.