ADVERTISEMENT

ಬಿಜೆಪಿಯಿಂದ ಹಿಂದುಳಿದ ವರ್ಗಗಳ ದುರ್ಬಳಕೆ

ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 12:46 IST
Last Updated 11 ಜನವರಿ 2023, 12:46 IST
ಮಧು ಬಂಗಾರಪ್ಪ 
ಮಧು ಬಂಗಾರಪ್ಪ    

ವಿಜಯಪುರ: ಬಿಜೆಪಿ ಮತ್ತು ಸಂಘ ಪರಿವಾರದವರು ತಮ್ಮ ಹಿಂದುತ್ವ ಮತ್ತು ಕೋಮುವಾದ ಅಜೆಂಡಾ ಅನುಷ್ಠಾನಕ್ಕೆ ಹಿಂದುಳಿದ ವರ್ಗಗಳನ್ನು ದುರುಪಯೋಗ ಪಡಿಸಿಕೊಂಡು ಬಲಿಪಶು ಮಾಡುತ್ತಿದೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಬಿಜೆಪಿ, ಸಂಘ ಪರಿವಾರ ಪ್ರೇರಿತ ಕೋಮು ಸಂಘರ್ಷಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವವರ ಪೈಕಿ ಶೇ 70ರಷ್ಟು ಆರೋಪಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದರು.

‘ರಸ್ತೆ, ಚರಂಡಿ, ಅಭಿವೃದ್ಧಿ ವಿಷಯ ಬಿಟ್ಟು, ಲವ್‌ ಜಿಹಾದ್‌ ವಿಷಯದ ಮೇಲೆ ಮತ ಕೇಳಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುತ್ತಾರೆ. ಕಟೀಲ್‌ ಒಬ್ಬ ನಾಲಾಯಕ್‌ ವ್ಯಕ್ತಿ. ಸಂಸದರಾಗಿದ್ದುಕೊಂಡು ಈ ರೀತಿ ಹೇಳಿಕೆ ನೀಡುವ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು.

ADVERTISEMENT

ಹಿಂದುಳಿದ ವರ್ಗಕ್ಕೆ ಆದ್ಯತೆ:

ರಾಜ್ಯದಲ್ಲಿ ಶೇ 55ರಷ್ಟು ಮತದಾರರು ಹಿಂದುಳಿದ ಜಾತಿಗಳಿಗೆ ಸೇರಿದವರಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‌ ಪರವಾಗಿದ್ದ ಈ ವೋಟ್‌ ಬ್ಯಾಂಕ್‌ ಇತ್ತೀಚಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬಿಜೆಪಿಯತ್ತ ವಾಲಿತ್ತು. ಈ ಸಮುದಾಯವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತರಲು ಆದ್ಯತೆ ನೀಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಹಿಂದುಳಿದ ವರ್ಗಕ್ಕೆ ಸೇರಿದ ಮುಖಂಡರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲು ಹಾಗೂ ಗೆಲ್ಲುವ ಮಾನದಂಡ ಆಧರಿಸಿ ಮುಂಬರುವ ಚುನಾವಣೆಯಲ್ಲೂ ಹೆಚ್ಚಿನ ಟಿಕೆಟ್‌ ಲಭಿಸುವಂತೆ ಮಾಡಲು ಹಾಗೂ ಪಕ್ಷ ಅಧಿಕಾರಕ್ಕೆ ಬಂದ ಬಳಿಕವೂ ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಪಕ್ಷ ಹೆಚ್ಚಿನ ಒತ್ತು ನೀಡಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಸದ್ಯ ಕಾಂಗ್ರೆಸ್‌ ಪರವಾದ ಅಲೆ ಇದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಕಾಂಗ್ರೆಸ್‌ ಪರ ಸೆಳೆಯಲು ಫೆಬ್ರುವರಿ ಅಂತ್ಯದೊಳಗಾಗಿ ಪ್ರತಿ ಜಿಲ್ಲಾವಾರು ಸಮಾವೇಶ ನಡೆಸಲಾಗುವುದು, ಮಾರ್ಚ್‌ ಮೊದಲ ವಾರದಲ್ಲಿ ಹಾವೇರಿ ಅಥವಾ ಹುಬ್ಬಳ್ಳಿಯಲ್ಲಿ ಒಬಿಸಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಿಂದ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಕ್ಕೆ ದೊಡ್ಡಮಟ್ಟದ ಶಕ್ತಿ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಣಾಳಿಕೆಯಲ್ಲಿ ಆದ್ಯತೆ:

ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಮುಖ್ಯ ಸಮಸ್ಯೆಗಳ ನಿವಾರಣೆಗೆ ಪಕ್ಷ ರೂಪಿಸುವ ಕಾರ್ಯಕ್ರಮಗಳು ಹಾಗೂ ಪ್ರತಿ ಜಿಲ್ಲಾವಾರು ರೂಪಿಸುವ ಯೋಜನೆಗಳನ್ನು ಸೇರಿಸಲಾಗುವುದು ಎಂದರು.

ಬಿಜೆಪಿ ಪ್ರಣಾಳಿಕೆ ಹೆಸರಲ್ಲಿ ಬುರುಡೆ ಬಿಡುತ್ತದೆ. ಅನುಷ್ಠಾನ ಶೂನ್ಯ. 2018ರ ಚುನಾವಣೆಯಲ್ಲಿ ನೀಡಿದ್ದ 300 ಭರವಸೆಗಳನ್ನು ಯಾವೊಂದು ಈಡೇರಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಎಂದರೆ ಬಿಸಿನೆಸ್‌ ಜನತಾ ಪಾರ್ಟಿ ಎಂದರ್ಥ. ಜಲಜೀವನ ಮಿಷನ್‌ ಯೋಜನೆ(ಜೆಜೆಎಂ) ಹೆಸರಲ್ಲಿ ಮನೆಮನೆಗೆ ನಳಕ್ಕೆ ಮೀಟರ್‌ ಅಳವಡಿಸಲು ಹೊರಟಿದೆ. ರೈತರ ಪಂಪ್‌ಸೆಟ್‌ಗೆ ಬಿಲ್‌ ಮಾಡಲು ಹೊರಟಿದ್ದಾರೆ. ಗೊಬ್ಬರದ ಬೆಲೆ ಗಗನಕ್ಕೇರಿದೆ, ಎಲ್‌ಪಿಸಿ ಸಿಲಿಂಡರ್‌ ಬೆಲೆ ಏರಿಕೆ ಹೇಳತೀರದಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಸಾಹೇಬಗೌಡ ಬಿರಾದಾರ, ವೈಜನಾಥ ಕರ್ಪೂರಮಠ, ಕೆ.ಎಫ್‌.ಅಂಕಲಗಿ, ಗುರುನಗೌಡ ಪಾಟೀಲ, ರಾಜೇಶ್ವರಿ ಚೊಳಕೆ, ಸುಜಾತಾ ಕಳ್ಳಿಮನಿ, ಚಾಂದಸಾಬ್‌ ಗಡಗಲಾವ್‌, ಜಮೀನ್‌ ಅಹಮ್ಮದ್‌ ಭಕ್ಷಿ ಇದ್ದರು.

ರಾಜ್ಯದಲ್ಲಿ ಬಿಜೆಪಿಯ ಹಿಂದುತ್ವದ ಅಜೆಂಡಾ ನೆಲಕಚ್ಚಿದೆ. ಹಿಂದುಳಿದವರ ಸಾವಿನ ಮೇಲೆ ಚುನಾವಣೆ ಮಾಡುವ ತಂತ್ರಗಾರಿಕೆ ಬಗ್ಗೆ ಜನ ಸಾಮಾನ್ಯರಿಗೂ ಅರ್ಥವಾಗಿದೆ. ಬಿಜೆಪಿ ಪಾಪದ ಕೊಡ ತುಂಬಿದೆ

–ಮಧು ಬಂಗಾರಪ್ಪ, ಅಧ್ಯಕ್ಷ, ಕೆಪಿಸಿಸಿ ಒಬಿಸಿ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.