ADVERTISEMENT

ವಿವಿಧ ಬೇಡಿಕೆಗಳಿಗೆ ಆಗ್ರಹ: ರೈತ ಸಂಘಟನೆಗಳಿಂದ ಡಿ.6ರಿಂದ ಉಪವಾಸ ಸತ್ಯಾಗ್ರಹ 

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 11:19 IST
Last Updated 3 ಡಿಸೆಂಬರ್ 2024, 11:19 IST
   

ವಿಜಯಪುರ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ನೇತೃತ್ವದಲ್ಲಿ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಡಿ. 6 ರಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು  ಸಂಯುಕ್ತ ಕಿಸಾನ್ ಮೋರ್ಚ ದಕ್ಷಿಣ ಭಾರತ ಸಂಚಾಲಕ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಫಸಲ್ ಭೀಮಾ ಬೆಳೆ ವಿಮೆ ಯೋಜನೆ ಲೋಪದೋಷಗಳು ಸರಿಪಡಿಸಬೇಕು ಎಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಚಳವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿ ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರನ್ನು ದೇಶದ್ರೋಹಿಗಳು. ಕಳ್ಳ ಕಾಕರ ರೀತಿಯಲ್ಲಿ ಮಧ್ಯರಾತ್ರಿ ಬಂಧಿಸಿ ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ನೂರಾರು ರೈತರು ಕನೋರಿ ಬಾರ್ಡರ್‌ನಲ್ಲಿ ಉಪವಾಸ ಕುಳಿತಿದ್ದಾರೆ.  ಸರ್ಕಾರ ರೈತರ ಹಕ್ಕನ್ನು ದಮನ ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸುತ್ತೇನೆ ಎಂದರು.

ADVERTISEMENT

ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳವಳಿಯ ಬಗ್ಗೆ ವರದಿ ನೀಡಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ನವಾಬ್ ಸಿಂಗ್ ಹಾಗೂ ಪರಿಣಿತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ನವೆಂಬರ್ 22 ರಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಪ್ರಾಥಮಿಕ ವರದಿಯಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಹಾಗೂ ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಎಂಎಸ್ ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಈ ವರದಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ರೈತ ಚಳವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಹೋರಾಟ ನಿರತ  ರೈತ ಮುಖಂಡರನ್ನು ಬಂಧನ ಮಾಡಿ ಬಿಡುಗಡೆ ಮಾಡಿರುವುದು ಆಸ್ಯಾಸ್ಪದ,  ಖಂಡನೀಯ. ಕೇಂದ್ರ ಸರ್ಕಾರ ರೈತ ಮುಖಂಡರ ಜೊತೆ ತಕ್ಷಣ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಬಜಟ್‌ನಲ್ಲಿ ರೈತರ ಸಾಲವನ್ನು ಶೇ16 ರಷ್ಟು ಏರಿಕೆ ಮಾಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಣೆ ಮಾಡಿದ್ದರು. ಆದರೆ, ಈಗ ನಬಾರ್ಡ್ ಮೂಲಕ ಸಹಕಾರ ಸಂಘಗಳಲ್ಲಿ ರೈತರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ ಕಡಿವಾಣ ಹಾಕಲು ಶೇ 50ರಷ್ಟು ಅನುದಾನ ಕಡಿತ ಮಾಡಿದ್ದಾರೆ. ಇದು ರೈತರಿಗೆ ಸಹಕಾರ ಸಂಘಗಳಲ್ಲಿ ನೀಡುತ್ತಿದ್ದ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ  ಹುನ್ನಾರವಾಗಿದೆ. ರಾಜ್ಯದ ಸಂಸದರಿಗೆ ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಕಡಿತ ಮಾಡಿರುವ ಶೇ 50 ರಷ್ಟು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಿ ಎಂದರು.

ರೈತರ ಹಬ್ಬ: ಡಿಸೆಂಬರ್ 23 ರಂದು ಮೈಸೂರಿನಲ್ಲಿ ವಿಶ್ವ ರೈತ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ರೈತ ಸಮಾವೇಶ  ರೈತರ ಹಬ್ಬ ನಡೆಯಲಿದೆ ಎಂದು ತಿಳಿಸಿದರು.

ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವುದರಿಂದ ಎಫ್ಆರ್‌ಪಿ ಮೇಲೆ ಹೆಚ್ಚುವರಿ ದರ ನಿಗದಿ ಮಾಡಬೇಕು. ಹಿಂದಿನ ವರ್ಷ ರಾಜ್ಯ ಸರ್ಕಾರ ನಿಗದಿ ಮಾಡಿದ ಹೆಚ್ಚುವರಿ ಟನ್‌ಗೆ ₹150 ಕೂಡಲೇ ಕೊಡಿಸಬೇಕು, ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿ ಮೋಸ ಮಾಡುತ್ತಿವೆ, ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಫಸಲ್ ಭೀಮಾ ಬೆಳೆ ವಿಮೆ ಯೋಜನೆ ಲೋಪದೋಷಗಳು ಸರಿಪಡಿಸಬೇಕು. ಬೆಳೆ ವಿಮೆ ನಷ್ಟ ಪರಿಹಾರದ ಹಣ ಕೂಡಲೇ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ರಾಜು ಗುಂದಗಿ, ಧರೆಪ್ಪ ಗೌಡ ಬಿರಾದಾರ, ಸುರೇಶ್ ಗರಸಂಗಿ, ಮಹಂತೇಶ ಕೆಲೋಟಗಿ, ಕುಮಾರ್ ಕಿಳೆಗಾವಿ, ಪಾಂಡು ದಳವಾಯಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.