
ದೇವರಹಿಪ್ಪರಗಿ: ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ನಾಯ್ಕೋಡಿ ಕುಟುಂಬಕ್ಕೆ ಸೇರಿದ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ವಿದ್ಯುತ್ ಅವಘಡದಿಂದ ಸಂಪೂರ್ಣ ಭಸ್ಮವಾಗಿದೆ.
ಗ್ರಾಮದ ಸುಭಾನಲ್ಲಾ ಉಸ್ಮಾನಸಾಬ್ ನಾಯ್ಕೋಡಿ, ಮೈಬೂಸುಭಾನಿ ನಾಯ್ಕೋಡಿ ಅವರಿಗೆ ಸೇರಿದ ಸರ್ವೇ ನಂ.349 ರಲ್ಲಿನ ಕಬ್ಬು ಬೆಳೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಹಾನಿಗೀಡಾಗಿದೆ. ಹಾನಿಗೀಡಾದ ಪ್ರದೇಶಕ್ಕೆ ಹೆಸ್ಕಾಂ ಶಾಖಾಧಿಕಾರಿ ಉಮೇಶ ಪಟ್ಟಣ, ಗ್ರಾಮಾಡಳಿತಾಧಿಕಾರಿ ರಮಾನಂದ ಚಕ್ಕಡಿ, ಕಿರಿಯ ಲೈನ್ಮನ್ ಈರಯ್ಯ ಮಠ ಭೇಟಿ ನೀಡಿ ಪರಿಶೀಲಿಸಿದರು.
ಕಬ್ಬು ಕಟಾವಿಗೆ ಬಂದು ಕಾರ್ಖಾನೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಹೀಗಾಗಿ ವರ್ಷದ ರೈತರ ಆದಾಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ತಾಲ್ಲೂಕಿನಾದ್ಯಂತ ಕಳೆದ ಮೂರು ವರ್ಷದಿಂದ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಸುಟ್ಟು ಹೋಗುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಅದಕ್ಕಾಗಿ ತಕ್ಷಣವೇ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಕಚೇರಿ ಆರಂಭಿಸಬೇಕು. ಜೊತೆಗೆ ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿಕೊಡಬೇಕು ಎಂದು ರಾಷ್ಟ್ರೀಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ಸದಸ್ಯರಾದ ಶಕೀರಾ ಹೆಬ್ಬಾಳ, ಸಂಪತ್ ಜಮಾದಾರ, ದಾವಲಸಾಬ್ ಹೆಬ್ಬಾಳ ಸರ್ಕಾರವನ್ನು ಆಗ್ರಹಿಸಿದ್ದಾರೆ.