ತಾಳಿಕೋಟೆ: ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಅಬ್ಬರದ ಮಳೆಗೆ ವಿದ್ಯಾಭಾರತಿ ಪ್ರೌಢಶಾಲೆಯಯ ಬಳಿ ದೇವರಹಿಪ್ಪರಗಿ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ಜಾನಕಿ ಹಳ್ಳಕ್ಕೆ ಪ್ರವಾಹ ಬಂದು, ರಸ್ತೆಯ ಮೇಲೆ ತುಂಬಿ ಹರಿಯಿತು.
ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೋರ್ ಶಾಪ್ ಮುಂದೆ ನೀರು ಹಳ್ಳದೋಪಾದಿಯಲ್ಲಿ ಹರಿಯಿತು. ಇದರಿಂದ ದೇವರ ಹಿಪ್ಪರಗಿಯತ್ತ ಹೋಗುವ ವಾಹನಗಳು, ಆಶ್ರಯ ಬಡಾವಣೆ, ಅಂಬಿಗರ ಚೌಡಯ್ಯ ವೃತ್ತ, ಬಸ್ ಡಿಪೋದತ್ತ ಹೋಗುವ ಜನರು ವಾಹನಗಳಿಗೆ ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ತಡೆಯಾಯಿತು.
ಹಳ್ಳದ ಪ್ರವಾಹದ ನೀರು ವಿದ್ಯಾಭಾರತಿ ಶಾಲೆಯ ಹಿಂದೆ ಆವರಣದಲ್ಲಿನ ಮನೆಗಳಿಗೂ ನುಗ್ಗಿದೆ. ಹಳ್ಳದ ನೀರು ಎಸ್.ಕೆ.ಕಾಲೇಜಿನ ಹಿಂದುಗಡೆಯಿಂದ ಹರಿಯುತ್ತಿದ್ದು, ಅಲ್ಲಿ ಆಶ್ರಯ ಬಡಾವಣೆಗೆ ಹೋಗುವ ರಸ್ತೆ ಪ್ರವಾಹದಿಂದ ಬಂದ್ ಆಗಿದೆ. ಜೋರು ಮಳೆ, ಪ್ರವಾಹದಲ್ಲಿ ವ್ಯಕ್ತಿಯೊಬ್ಬ ಸಿಲುಕಿದ್ದು ಚೀರಾಡುತ್ತಿದ್ದನು. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಕತ್ತಲೆಯಲ್ಲಿ ಆತನ ಇರುವಿಕೆ ಗುರುತಿಸಲಾಗಲಿಲ್ಲ ಎಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಣೆ ಮಾಡಿದರು. ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಬಂದೇನವಾಜ್ ಕರಿಮಸಾ ವನಹಳ್ಳಿ(35) ಎಂದು ತಿಳಿದು ಬಂದಿದೆ.
ಜಾನಕಿ ಹಳ್ಳದ ಹರಿವಿನ ಪ್ರದೇಶ ಒತ್ತುವರಿಯಾಗಿದ್ದು ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.