ವಿಜಯಪುರ: ಜಾನಪದ ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕ. ಜಾನಪದ ಸಾಹಿತ್ಯದ ಮಾಲೀಕರು ಗ್ರಾಮೀಣರು ಎಂದು ಬಸವನಬಾಗೇವಾಡಿ ಹಿರೇಮಠ ಸಂಸ್ಥಾನದ ಶಿವಪ್ರಕಾಶ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕ ಹಾಗೂ ಇಂಗಳೇಶ್ವರ ವಿರಕ್ತಮಠ ಆಶ್ರಯದಲ್ಲಿ ಜರುಗಿದ ಜಾನಪದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣರ ಬದುಕೆ ಜಾನಪದ ಸಾಹಿತ್ಯವಾಗಿತ್ತು. ಶತಮಾನಗಳಿಂದ ಬೆಳೆದು ಬಂದಿರುವ ಸಾಹಿತ್ಯ ಜಾನಪದ. ಗ್ರಾಮೀಣರ ಸಂಸ್ಕೃತಿ ಅರಿತು ಬದುಕಬೇಕು ಎಂದರು.
ಮನಗೂಳಿಯ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯರು ಮಾತನಾಡಿ, ನಮ್ಮೆಲ್ಲರ ಹಿರಿಯರು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡಿದ ಹಾಡುಗಳೇ ಜಾನಪದ ಸಾಹಿತ್ಯವಾಗಿ ಬೆಳೆದು ಬಂದಿತು ಎಂದರು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪೂರ್ವಜರು ಅನೇಕ ಸ್ವರಚಿತ ಕವನ ಬರೆದು ಹಾಡಿದ್ದು, ಇಂದಿಗೂ ಪ್ರಸ್ತುತ. ಹಂತಿ ಪದ, ಶೋಬಾನೆ ಪದ, ಗೀಗಿ ಪದ, ಮೊಹರಂ ಪದ, ತೊಟ್ಟಿಲ ಪದ, ಮುಂತಾದ ಹಾಡುಗಳನ್ನು ಹಾಡಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತಿ ಸಿದ್ದಲಿಂಗ ಮಣೂರ ಮಾತನಾಡಿ, ಜಾನಪದ ಸಾಹಿತ್ಯ ರೈತಾಪಿ ಜನರ ಹಾಗೂ ಗ್ರಾಮೀಣ ಗರತಿಯರ ಸಾಹಿತ್ಯ ಮೌಖಿಕವಾಗಿ ಪರಂಪರೆಯಿಂದ ಬೆಳೆದು ಬಂದಿದೆ. ಗ್ರಾಮೀಣರ ಜಾನಪದ ಸಾಹಿತ್ಯ ನಮ್ಮೆಲ್ಲರ ಜೀವನದ ಮೌಲ್ಯ ಒಳಗೊಂಡಿದೆ ಎಂದರು.
ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಉಪನ್ಯಾಸ ನೀಡಿದರು. ಸಾಹಿತಿ ಅಶೋಕ ಹಂಚಲಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮನಗೂಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕಸಾಪ ಬಸವನ ಬಾಗೇವಾಡಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಡೋಣೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ, ಬಸವರಾಜ ಹಾರಿವಾಳ, ಶಿವಪುತ್ರ ಅಂಕದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.