ADVERTISEMENT

ಗ್ರಾ.ಪಂ. ಕರ ವಸೂಲಿ; ವಿಜಯಪುರ ಪ್ರಥಮ

ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಹರ್ಷ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:02 IST
Last Updated 8 ಏಪ್ರಿಲ್ 2022, 15:02 IST
ರಾಹುಲ್ ಶಿಂಧೆ
ರಾಹುಲ್ ಶಿಂಧೆ   

ವಿಜಯಪುರ: 2021-22 ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ ವಿಜಯಪುರ ಜಿಲ್ಲೆ ಗ್ರಾಮ ಪಂಚಾಯ್ತಿ ಕರ ವಸೂಲಾತಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.

ರಾಜ್ಯದ 10 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಪ್ರಸಕ್ತ ವರ್ಷದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಅದರಲ್ಲಿ ವಿಜಯಪುರ ಮೊದಲ ಸ್ಥಾನದಲ್ಲಿದೆಎಂಬುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ರಾಜ್ಯದ 31 ಜಿಲ್ಲೆಗಳಲ್ಲಿ 2021-22 ನೇ ಸಾಲಿನಲ್ಲಿ ಚಾಲ್ತಿ ಬೇಡಿಕೆ ಒಟ್ಟು ₹ 752.61 ಕೋಟಿ ನಿಗದಿಯಾಗಿತ್ತು. ಅದರಲ್ಲಿ ಮಾರ್ಚ್ ಕೊನೆಯವರೆಗೆ ₹685.95 ಕೋಟಿ ತೆರಿಗೆ ವಸೂಲಿಯಾಗಿದ್ದು, ಶೇ 91.15 ರಷ್ಟು ಸಾಧನೆಯಾಗಿದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ 211 ಗ್ರಾಮ ಪಂಚಾಯಿತಿಗಳಿಂದ ಚಾಲ್ತಿ ಬೇಡಿಕೆ ₹ 14.80 ಕೋಟಿ ತೆರಿಗೆ ಸಂಗ್ರಹ ಗುರಿಗೆ ಅನುಗುಣವಾಗಿ, ₹21.58 ಕೋಟಿ ತೆರಿಗೆ ವಸೂಲಿಯಾಗಿದ್ದು, ಚಾಲ್ತಿ ಬೇಡಿಕೆಗೆ ಶೇ 100ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ಒಟ್ಟು ಬೇಡಿಕೆಗೆ ಶೇ 15 ರಷ್ಟು ಹೆಚ್ಚು ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

2021-22ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಯ 211 ಗ್ರಾಮ ಪಂಚಾಯಿತಿಗಳು ಅತ್ಯುತ್ತಮ ಸಾಧನೆ ಮಾಡಿವೆ. ಜಿಲ್ಲೆಯು ಪ್ರಥಮ ಬಾರಿಗೆ ನಿಗದಿತ ಗುರಿ ಮೀರಿ ಸಾಧನೆ ಮಾಡಿದೆ. ಇದಕ್ಕೆ ಶ್ರಮಿಸಿದ ಜಿಲ್ಲೆಯ ಎಲ್ಲ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಹಾಗೂ ಗ್ರಾಮ ಪಂಚಾಯಿತಿಯ ಇತರೆ ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಲದೇ, ಗ್ರಾಮ ಪಂಚಾಯಿತಿಯ ಕರ ವಸೂಲಾತಿ ಆಂದೋಲನಕ್ಕೆ ಓಗೊಟ್ಟು ಕರ ಸಂದಾಯ ಮಾಡಿದ ಜಿಲ್ಲೆಯ ಎಲ್ಲ ಗ್ರಾಮೀಣ ಜನತೆಗೆ ಹಾಗೂ ಎನ್.ಟಿ.ಪಿ.ಸಿಯವರಿಗೂ ಸಹ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕಳೆದ ವರ್ಷದಂತೆ 2022-23ನೇ ಸಾಲಿನಲ್ಲಿಯೂ ಸಹ ಜಿಲ್ಲೆಯ ಎಲ್ಲ ಗ್ರಾಮೀಣ ಜನತೆಯು ಕರ ಸಂದಾಯ ಮಾಡುವ ನಿರೀಕ್ಷೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿ ಪ್ರತಿದಿನ ಹಗಲಿರುಳೆನ್ನದೆ ಗ್ರಾಮಗಳಲ್ಲಿರುವ ಪ್ರತಿ ಮನೆ-ಮನೆಗಳಿಗೆ ತೆರಳಿ ಜನರನ್ನು ಮನವೊಲಿಸಿ ಕರ ವಸೂಲಾತಿ ಮಾಡಿದ್ದಾರೆ

–ರಾಹುಲ್ ಶಿಂಧೆ, ಸಿಇಒ,ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.