ADVERTISEMENT

ವಿಜಯಪುರ: 12 ಗ್ರಾಮಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’

ಕೋವಿಡ್‌ ಸಂಕಷ್ಟ; ನಗದು ಬಹುಮಾನ ಅನುಮಾನ?

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:19 IST
Last Updated 30 ಸೆಪ್ಟೆಂಬರ್ 2020, 17:19 IST
ಗೋವಿಂದ ರೆಡ್ಡಿ
ಗೋವಿಂದ ರೆಡ್ಡಿ   

ವಿಜಯಪುರ: ಜಿಲ್ಲೆಯ 12 ಗ್ರಾಮಗಳನ್ನು ಪ್ರಸಕ್ತ (2019–20) ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ, ತಿಕೋಟಾ ತಾಲ್ಲೂಕಿನ ಬಿಜ್ಜರಗಿ, ಬಬಲೇಶ್ವರ ತಾಲ್ಲೂಕಿನ ನಿಡೋಣಿ, ಬಸವನ ಬಾಗೇವಾಡಿ ತಾಲ್ಲೂಕಿನ ಕು.ಸಾಲವಾಡಗಿ, ನಿಡಗುಂದಿ ತಾಲ್ಲೂಕಿನ ಬೇನಾಳ(ಆರ್.ಸಿ), ಕೊಲ್ಹಾರ ತಾಲ್ಲೂಕಿನ ಕೂಡಗಿ ಆಯ್ಕೆಯಾಗಿವೆ.

ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ, ತಾಳಿಕೋಟೆ ತಾಲ್ಲೂಕಿನ ಬ.ಸಾಲವಾಡಗಿ, ಸಿಂದಗಿ ತಾಲ್ಲೂಕಿನ ಚಾಂದಕವಟೆ, ದೇವರ ಹಿಪ್ಪರಿ ತಾಲ್ಲೂಕಿನ ಕೊಂಡಗೂಳಿ, ಇಂಡಿ ತಾಲ್ಲೂಕಿನ ಚವಡಿಹಾಳ ಮತ್ತು ಚಡಚಣ ತಾಲ್ಲೂಕಿನ ಬರಡೋಲ ಗ್ರಾಮಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ADVERTISEMENT

ಗಾಂಧಿ ಗ್ರಾಮ‍ಪುರಸ್ಕಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಪ್ರತಿ ವರ್ಷ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸುತ್ತದೆ. ಅರ್ಜಿ ಸಲ್ಲಿಸಿದ ಪ್ರತಿ ತಾಲ್ಲೂಕಿನ ಅತ್ಯುತ್ತಮ ಐದು ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಗ್ರಾಮಕ್ಕೂ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ, ವೀಕ್ಷಣೆ ಮಾಡಲಿದೆ. ಬಳಿಕ ಐದರಲ್ಲಿ ಒಂದು ಗ್ರಾಮವನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಸಿಇಒ ಗೋವಿಂದರೆಡ್ಡಿ ಹೇಳಿದರು.

ನಗದು ಬಹುಮಾನ ಅನುಮಾನ:

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮಗಳಿಗೆ ತಲಾ ₹ 5 ಲಕ್ಷ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ನಗದು ಬಹುಮಾನ ನೀಡುವುದು ಅನುಮಾನವಿದೆ. ಅಲ್ಲದೇ, ಪ್ರಶಸ್ತಿ ಪ್ರದಾನ ಎಂದು ನಡೆಯಲಿದೆ ಎಂದು ಇದುವರೆಗೂ ಗ್ರಾಮ ಪಂಚಾಯ್ತಿಗಳಿಗೆ ಮಾಹಿತಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.