ADVERTISEMENT

ಕೋವಿಡ್‌ ಮರಣ ಪ್ರಮಾಣ ಮರೆಮಾಚುತ್ತಿರುವ ಸರ್ಕಾರ: ಶಾಸಕ ಎಂ.ಬಿ.ಪಾಟೀಲ

ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಹರಿಹಾಯ್ದ ಶಾಸಕ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಮೇ 2021, 14:15 IST
Last Updated 11 ಮೇ 2021, 14:15 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಮರಣ ಪ್ರಮಾಣ ಕಡಿಮೆ‌ ಇದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಸುಳ್ಳು ಹೇಳುತ್ತಿದ್ದಾರೆ. ಆದರೆ, ಸಾವಿರ ಪಟ್ಟು ಮರಣ ಪ್ರಮಾಣವನ್ನು ಕಡಿಮೆ ತೋರಿಸುತ್ತಿದ್ದಾರೆ. ಸಾವಿನ ಸತ್ಯ ಸಂಖ್ಯೆ ಹೇಳಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮರೆಮಾಚುತ್ತಿದ್ದಾರೆ ಎಂದುಶಾಸಕ ಎಂ.ಬಿ.ಪಾಟೀಲ ಗಂಭೀರವಾಗಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೋವಿಡ್‌ ರೋಗಿಗಳ ಮಾರಣ ಹೋಮ‌ ನಡೆದಿದೆ. ಸರ್ಕಾರ ಎಚ್ಚೆತ್ತುಕೊಂಡು ಸಾವಿನ ಪ್ರಮಾಣ ನಿಲ್ಲಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರದಲ್ಲಿ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾಯವವರು ಸಾಯುತ್ತಾ ಇದ್ದಾರೆ. ಸರ್ಕಾರ ಸರಿಯಾದ ಸಮಯಕ್ಕೆ ಔಷಧ ಇತರೆ ವ್ಯವಸ್ಥೆ ಮಾಡಿದ್ದರೆ ಜನರು ಸಾಯುತ್ತಿರಲಿಲ್ಲ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾದಿಂದ ಬಂದು ಹೋದರೆ ಜಿಲ್ಲೆಯ ಸಮಸ್ಯೆ ಬಗೆಹರಿಯಲ್ಲ ಎಂದು ಅವರ ವಿರುದ್ದ ಆಕ್ರೋಶ ಹೊರ ಹಾಕಿದರು.

ಕೇಂದ್ರ, ರಾಜ್ಯ ವಿಫಲ:

ಕೊವಿಡ್ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅಗತ್ಯವಿರುವಷ್ಟು ರೆಮ್‌ ಡಿಸಿವಿರ್ ಇಂಜೆಕ್ಷನ್‌ ಪೂರೈಸುತ್ತಿಲ್ಲ. ಆಕ್ಸಿಜನ್ ವಿಷಯದಲ್ಲೂ ಹಾಗೆಯೇ ಆಗಿದೆ. ಆದರೆ, ಸುಪ್ರೀಂಕೋರ್ಟ್ ಉಪಕಾರದಿಂದ ನಮಗೆ ಆಕ್ಸಿಜನ್ ಸಿಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮಹಾರಾಜರಂತೆ ವೈಭೋಗದ ಆಡಳಿತ ನಡೆಸತೊಡಗಿದ್ದಾರೆ. ರೂ 20 ಸಾವಿರ ಕೋಟಿ ಮೊತ್ತದ ನ್ಯೂ ವಿಸ್ತಾ ಹೊಸ ಲೋಕಸಭೆ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೂ 20 ಸಾವಿರ ಕೋಟಿಯಲ್ಲಿ 62 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಹಾಕಿಸಬಹುದಾಗಿದೆ. 2 ಲಕ್ಷಕ್ಕೂ ಹೆಚ್ಚು ವೆಂಟಿಲೇಟರ್ ಬೆಡ್ ನಿರ್ಮಾಣ ಮಾಡಬಹುದಾಗಿದೆ. ಮೋದಿಗೆ ಜನ ಬೇಕೋ ಅಥವಾ ನ್ಯೂ ವಿಸ್ತಾ ಬೇಕೋ ಎಂದು ಪ್ರಶ್ನಿಸಿದರು.

ಇದುವರೆಗೂ ಕೇಂದ್ರ ಸರ್ಕಾರ ಟಾಸ್ಕ್ ಫೋರ್ಸ್‌ ಸಭೆ ನಡೆಸಿಲ್ಲ, ಕೊವಿಡ್ ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈಗ ಸಂಭವಿಸುತ್ತಿರುವ ಲಕ್ಷಾಂತರ ಸಾವಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಕೇವಲ ಭವಿಷ್ಯದ ಬಗ್ಗೆ ಮಾತನಾಡುತ್ತಿದೆ. ಮೂರನೇ ಅಲೆ ಕುರಿತು ಮಾತನಾಡುತ್ತಿದೆ. ಆದರೆ, ಎರಡನೆ ಅಲೆ ತಡೆಯಲು ಏನೂ ಮಾಡುತ್ತಿಲ್ಲ. ಕೇವಲ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅಲ್ಲದೆ, ಭರವಸೆ ನೀಡುವುದರಲ್ಲೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಗೂ ಆಕ್ಸಿಜನ್ ಸೌಲಭ್ಯ ನೀಡಬೇಕು. ರಾಜ್ಯದಲ್ಲಿ ಲಿಕ್ವಿಡ್ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎಂದು ಹೇಳಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಕೂಲಿ‌ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್‌ನಿಂದ ಪಾರ್ಸೆಲ್‌ ನೀಡಿದ್ದರೂ ಬದುಕುತ್ತಿದ್ದರು. ಅದನ್ನು ಬಂದ್ ಮಾಡಿ ವ್ಯವಸ್ಥೆ ಹದಗೆಡಿಸಿದ್ದಾರೆ ಎಂದು ಆರೋಪಿಸಿದರು.

‘ನೋಟ್‌ ಪ್ರಿಂಟ್‌ ಮಾಡೊ ಮಷಿನ್‌ ನಮ್ಮ ಇಲ್ಲ’ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಬಳಿ ನೋಟ್ ಪ್ರಿಂಟ್‌‌ ಮಷಿನ್‌‌ ಇರಲಿಕ್ಕಿಲ್ಲ ಆದರೆ, ನೋಟ್ ಎಣಿಸೊ ಮಷಿನ್ ಇರಬಹುದು ಎಂದು ವ್ಯಂಗವಾಡಿದರು.

ಈಶ್ವರಪ್ಪ ನಿಮ್ಮ ಮಾತಿಗೆ ಲಗಾಮು ಇಲ್ಲವೇ? ಉಡಾಫೆ ಮಾತನಾಡಿ ಜೀವ ತೆಗೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿ.ಎಲ್.ಡಿ.ಇ: 200 ಬೆಡ್‌ ಹೆಚ್ಚಳ’

ಬಿ.ಎಲ್.ಡಿ.ಇ.ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗಾಗಿ ಆಕ್ಸಿಜನ್‌ ಸೌಲಭ್ಯ ಇರುವ200 ಬೆಡ್‌ಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಆಸ್ಪತ್ರೆಯಲ್ಲಿ ಈಗಾಗಲೇ 300 ಆಕ್ಸಿಜನ್ ಬೆಡ್‌ಗಳಿದ್ದು, ಇದೀಗ ಮತ್ತೆ 200 ಹೊಸ ಆಕ್ಸಿಜನ್ ಬೆಡ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕೊವಿಡ್‌ಗಾಗಿ ಒಟ್ಟು 700 ಬೆಡ್ ನಿರ್ಮಾಣ ಮಾಡಿದ ರಾಜ್ಯದ ಏಕೈಕ ಆಸ್ಪತ್ರೆ ಬಿ.ಎಲ್.ಡಿ.ಇ.ಮಾತ್ರ. ನಮಗೆ ಆಕ್ಸಿಜನ್ ಕೊಟ್ಟರೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಮಾತ್ರ ಸಾಧ್ಯ ಎಂದರು.

ಸರ್ಕಾರ ನಮ್ಮ ಆಸ್ಪತ್ರೆಗೆ ಬೇಕಾಗುವಷ್ಟು ಆಕ್ಸಿಜನ್ ಕೊಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಆಕ್ಸಿಜನ್ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಏಳು ಜನ ಹೆರಿಗೆ ವೈದ್ಯರಿದ್ದಾರೆ. ಆದರೂಕೋವಿಡ್ ಸೋಂಕಿತರಿಗೆ ಹೆರಿಗೆ ಮಾಡಿಸುತ್ತಿಲ್ಲ,ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿಲ್ಲ. ಗರ್ಭಿಣಿಯರನ್ನು ಬಿ.ಎಲ್.ಡಿ.ಇ.ಆಸ್ಪತ್ರೆಗೆ ಸಾಗ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರೇ ಬೇರೆ‌ ರಾಜ್ಯ ನೋಡಿ ಕಲಿಯಿರಿ, ನಿಮ್ಮ ಕೈಯಲ್ಲಿ ಆಡಳಿತ ನಡೆಸಲು ಆಗುವುದಿಲ್ಲ ಎಂದಾದರೆ ಸರ್ಕಾರ ವಿಸರ್ಜಿಸಿ.
ಎಂ.ಬಿ.ಪಾಟೀಲ, ಶಾಸಕ, ಬಬಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.