ADVERTISEMENT

ಗೌರಿಶಂಕರ ಜಾತ್ರೆ ಇಂದಿನಿಂದ; ಸೋಗಿನ ಅನಾವರಣ

ಶತಮಾನದಿಂದಲೂ ನಡೆದು ಬಂದ ಪರಂಪರೆಯ ಆಚರಣೆ; ಬೈಗುಳಗಳ ಸುರಿಮಳೆ

ಪ್ರಕಾಶ ಎನ್.ಮಸಬಿನಾಳ
Published 11 ಡಿಸೆಂಬರ್ 2018, 12:39 IST
Last Updated 11 ಡಿಸೆಂಬರ್ 2018, 12:39 IST
ಯರನಾಳದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿಶಂಕರ ಮೂರ್ತಿಗಳು
ಯರನಾಳದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿಶಂಕರ ಮೂರ್ತಿಗಳು   

ಯರನಾಳ (ಬಸವನಬಾಗೇವಾಡಿ):ಗ್ರಾಮದಲ್ಲಿ ಇದೇ 12, 13ರಂದು ಗೌರಿಶಂಕರ ಜಾತ್ರೆ ಸಡಗರ, ಸಂಭ್ರಮದಿಂದ ನಡೆಯಲಿದೆ.

ಜಾತ್ರೆ ಅಂಗವಾಗಿ ಗ್ರಾಮದಲ್ಲಿ ಪ್ರಗತಿಪರ ಚಿಂತನೆ, ಮೌಢ್ಯ ಆಚರಣೆ, ಮಡಿವಂತಿಕೆ, ವಿವಿಧ ವೃತ್ತಿಗಳು, ಮಹಿಳೆಯರನ್ನು ಗೌರವಿಸುವುದು, ಜನಪದ ಕಲೆಗಳ ಅನಾವರಣ ಸೇರಿದಂತೆ ವಿವಿಧ ಸೋಗುಗಳು ಈ ಸಂದರ್ಭ ನಡೆಯಲಿವೆ.

ಛೆಟ್ಟಿ ಅಮಾವಾಸ್ಯೆ ನಂತರ ಗ್ರಾಮದ ರೇವಣಸಿದ್ಧೇಶ್ವರ ದೇವಾಲಯದ ಬಳಿ ನಿತ್ಯ ರಾತ್ರಿ 10ರಿಂದ ವಿವಿಧ ವೇಷಗಳನ್ನು ಧರಿಸುತ್ತಿರುವ ಜನರು, ರಾತ್ರಿ 1 ಗಂಟೆವರೆಗೆ ತಮ್ಮ ಕಲೆ ಪ್ರದರ್ಶಿಸುತ್ತಿದ್ದಾರೆ.

ADVERTISEMENT

‘ಕುರುಬರ, ಕಂಬಾರ, ಕುಂಬಾರಿಕೆ, ಬಡಿಗತನ ಸೇರಿದಂತೆ ವಿವಿಧ ವೃತ್ತಿಗಳನ್ನು ತಿಳಿಸುವ ಸೋಗು, ಮೌಢ್ಯ ಆಚರಣೆ, ಮಡಿವಂತಿಕೆ ಸೇರಿದಂತೆ ವಿವಿಧ ಸೋಗುಗಳನ್ನು ಹಾಕಿಕೊಳ್ಳುವ ಜನರು, ಮೊದಲನೇ ದಿನ ಗ್ರಾಮಸ್ಥರ ಕ್ಷಮೆ ಕೇಳುತ್ತಾರೆ.

ಸೋಗು ಹಾಕಿಕೊಂಡವರು ನಮ್ಮದು ಎಲುಬಿಲ್ಲದ ನಾಲಗೆ. ನಾವು ಏನಾದರೂ ಮಾತನಾಡುತ್ತೇವೆ. ನಮ್ಮನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಾರೆ. ನಂತರ ಗ್ರಾಮದಲ್ಲಿ ಬೈಗುಳಗಳ ಸುರಿಮಳೆ ನಡೆಯುತ್ತದೆ. ಒಂದು ರಿತಿಯಲ್ಲಿ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಾಗುತ್ತದೆ ಎಂದು ಸೋಗು ಹಾಕಿಕೊಂಡವರು ಹೇಳುತ್ತಾರೆ. ಬೈಗುಳಗಳನ್ನು ಕೇಳುವ ಗ್ರಾಮಸ್ಥರು, ಪ್ರತ್ಯುತ್ತರ ನೀಡದೆ ನಗು ನಗುತ್ತಲೇ ಮುಂದೆ ಸಾಗುತ್ತಾರೆ’ ಎಂದು ಸೋಗು ಹಾಕಿಕೊಂಡಿರುವ ಶಾಂತು ಏಳಕಿ, ಗುರಪ್ಪ ಕಾಳಗಿ, ಶಿವಾನಂದ ಹಳಮನಿ ತಿಳಿಸಿದರು.

‘ಇಲ್ಲಿನ ಹಾಸ್ಯಮಯ ದೃಶ್ಯಗಳು ಜನರನ್ನು ರಂಜಿಸುತ್ತವೆ. ನಿತ್ಯ ನಡೆಯುವ ವ್ಯಾಪಾರಗಳ ಸನ್ನಿವೇಶ, ರಾಜಕೀಯ ಸನ್ನಿವೇಶ ಸೇರಿದಂತೆ ವಿವಿಧ ಸನ್ನಿವೇಶಗಳನ್ನು ಹಾಸ್ಯ ರೂಪದಲ್ಲಿ ತಿಳಿಸಲಾಗುತ್ತದೆ’ ಎಂದು ಸಿದ್ಧರಾಮ ಮಾಗಿ, ಕುಬೇರ ದಿನ್ನಿ, ರುದ್ರಗೌಡ ಪಾಟೀಲ ಮಾಹಿತಿ ನೀಡಿದರು.

‘ಸೋಗುಗಳಲ್ಲಿ ದಂಡು ಸೋಗು ಒಂದು. ಸೈನಿಕರ ವೇಷತೊಟ್ಟ ಜನರು, ಯುದ್ಧದ ಅಣಕು ಪ್ರದರ್ಶನ ಮಾಡುತ್ತಾರೆ. ಹೀಗೆ ಪ್ರತಿ ಸೋಗು ಒಂದೊಂದು ಸಂದೇಶವನ್ನು ತಿಳಿಸುವ ಕೆಲಸ ಮಾಡುತ್ತದೆ. ಗ್ರಾಮದಲ್ಲಿ ಸೋಗಿನಾಟವು ಹಲವು ಶತಮಾನಗಳಿಂದ ನಡೆದು ಬಂದಿದೆ. ಜನಪದ ಕಲೆ, ವೃತ್ತಿಗಳನ್ನು ಅನಾವರಣಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ’ ಎಂದು ರಮೇಶ ದೇಸಾಯಿ, ನೀಲಪ್ಪ ಸುಣಗದ ತಿಳಿಸಿದರು.

ಇದೇ 12ರ ಬುಧವಾರ ಉಷಾಟ ಜರುಗುವುದು. 13ರ ಬೆಳಿಗ್ಗೆ 11ಕ್ಕೆ ದಂಡಿನ ಸೋಗು, ಸಿಂಧೂರ ಲಕ್ಷ್ಮಣರ ಸೋಗು, ಜೋಗಮ್ಮನ ಸೋಗು, ಜೋಕುಮಾರನ ಸೋಗು, ದುರ್ಗವ್ವನ ಸೋಗಿನ ಮೆರವಣಿಗೆ ನಡೆಯುವುದು. ಸಂಜೆ 4ಕ್ಕೆ ರಾಮಲಕ್ಷ್ಮಣರ ಸೋಗು, ಮಹಾದೇವ ಸೋಗು, ದ್ಯಾಮವ್ವನ ಸೋಗು, ದೇವಿ ಸೋಗುಗಳ ಪ್ರದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ಗುಗ್ಗಳ ಮೆರವಣಿಗೆ ನಂತರ ಗೌರಿ ಪರಮೇಶ್ವರ ಉತ್ಸವ ಸಂಭ್ರಮದಿಂದ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.