ADVERTISEMENT

ಅತಿವೃಷ್ಠಿ; ಬಣ್ಣಗೆಟ್ಟ ಬಿಳಿಹತ್ತಿ

ಪರಿಹಾರಕ್ಕೆ ರೈತ ಸಮೂಹ ಒತ್ತಾಯ

ಶರಣಬಸಪ್ಪ ಎಸ್‌.ಗಡೇದ
Published 24 ಅಕ್ಟೋಬರ್ 2022, 13:38 IST
Last Updated 24 ಅಕ್ಟೋಬರ್ 2022, 13:38 IST
ತಾಳಿಕೋಟೆ ತಾಲ್ಲೂಕಿನ ಜಮೀನೊಂದರಲ್ಲಿ ಅತಿವೃಷ್ಟಿಯಿಂದ ಹತ್ತಿ ಬೆಳೆಯಲ್ಲಿ ನೀರು ನಿಂತಿರುವುದು.
ತಾಳಿಕೋಟೆ ತಾಲ್ಲೂಕಿನ ಜಮೀನೊಂದರಲ್ಲಿ ಅತಿವೃಷ್ಟಿಯಿಂದ ಹತ್ತಿ ಬೆಳೆಯಲ್ಲಿ ನೀರು ನಿಂತಿರುವುದು.   

ತಾಳಿಕೋಟೆ: ‘ಬಿಳಿ ಬಂಗಾರ’ ಎಂದೇ ಖ್ಯಾತಿ ಪಡೆದಿರುವ ಹತ್ತಿ ಫಸಲಿಗೆ ಕಳೆದ ವರ್ಷ ದೊರೆತ ಬಂಪರ್ ಬೆಲೆಯಿಂದ ಕಣ್ಣರಳಿಸಿದ್ದ ರೈತಾಪಿಗಳು ಈ ಬಾರಿ ತಾಲ್ಲೂಕು ಕ್ಷೇತ್ರದಲ್ಲಿ ಹೆಚ್ಚಿನೆಡೆ ಹತ್ತಿ ಫಸಲನ್ನೆ ಬೆಳೆದರು. ಉತ್ತಮ ಮಳೆ ಎನ್ನುವುದಕ್ಕಿಂತ ಹೆಚ್ಚಿನ ಮಳೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯ ಕಾರಣದಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಿ ಬೆಳೆ ಹಾಳಾಗುತ್ತಿದೆ. ತೊಗರಿಯನ್ನು ಬಿಟ್ಟು ಬೇರೆ ಬೆಳೆಯತ್ತ ರೈತರು ಕಣ್ಣು ಹಾಕಿದ್ದು, ಕಡಿಮೆ. ಏಳೆಂಟು ವರ್ಷಗಳಿಂದ ತೊಗರಿಯನ್ನೇ ಬೆಳೆಯುತ್ತಿದ್ದು, ಇಳುವರಿ ಕುಂಠಿತವಾಗಿದೆ. ಇದರಿಂದ ರೈತರ ಚಿತ್ತ ಹತ್ತಿಯತ್ತ ಹೆಚ್ಚಿತು.

ಪ್ರಸಕ್ತ ಸಾಲಿಗೆ ಐದು ಸಾವಿರ ಹೆಕ್ಟರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಕಪ್ಪು ಜಮೀನುಗಳಲ್ಲಿ ಹತ್ತಿ ಬೆಳೆ ಕಣ್ಣುಕುಕ್ಕುವಂತಾಗಿದೆ. ಆದರೆ, ಅತಿವೃಷ್ಠಿಯಿಂದಾಗಿ ಹೆಚ್ಚಿನೆಡೆ ಬಿಳಿಹತ್ತಿ ಬಣ್ಣಗೆಟ್ಟು ನಿಗದಿತ ಮೌಲ್ಯಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗುವ ಸ್ಥಿತಿ ತಲುಪಿದೆ.

ADVERTISEMENT

ಮಳೆಗೆ ಬಂದು ನೀರು ನಿಂತಲ್ಲಿ ಕೆಂಪಾಗಿವೆ. ಹೀಗೆ ನೀರು ನಿಂತ ಪ್ರದೇಶದಲ್ಲಿ ಒಮ್ಮೆ ಒಡೆದರೆ ಮತ್ತೆ ಹತ್ತಿ ಹೂವು ಬಿಟ್ಟು ಕಾಯಾಗಿ ಒಡೆಯದು. ಸಾಮಾನ್ಯವಾಗಿ ಹತ್ತಿ ತೊಳೆಯನ್ನು ಮೂರು ಹಂತದಲ್ಲಿ ಪಡೆಯುತ್ತಾರೆ. ಮಳೆರಾಯನ ಕಾಟದಿಂದ ಇನ್ನೆರಡು ಬಾರಿ ಪಡೆಯುವ ಕನಸು ನುಚ್ಚುನೂರಾಗಿ ಹೋಗಿದೆ. ಎಕರೆಗೆ ಒಣ ಬೇಸಾಯದಲ್ಲಿ ಸಾಮಾನ್ಯವಾಗಿ 8ರಿಂದ 10 ಕ್ವಿಂಟಲ್ ಫಸಲಿನ ಬದಲು ಮೂರರಿಂದ ನಾಲ್ಕು ಕ್ವಿಂಟಲ್ ಗೆ ಬರುವುದೂ ದುಸ್ತರವೆನ್ನಿಸಿದೆ ಎಂದು ರೈತ ಸಾಹೇಬಗೌಡ ಅನಂತರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಲಿಯಾಳು ಸಮಸ್ಯೆ:

ಹತ್ತಿ ಬಿಡಿಸುವುದಕ್ಕೆ ಪ್ರತಿ ಕೂಲಿಯಾಳಿಗೆ ಈಗ ₹300 ಕೂಲಿ ಕೊಡಬೇಕು. ಎಲ್ಲೆಡೆ ಹತ್ತಿ ಬೆಳೆ ದಂಡಿಯಾಗಿರುವುದರಿಂದ ಕೂಲಿಯಾಳಿನ ಜೊತೆ ಶಾಲಾ ವಯಸ್ಸಿನ ಮಕ್ಕಳು ಶಾಲೆಗೆ ರಜೆ ಮಾಡಿ, ಹತ್ತಿ ಬಿಡಿಸಲು ಬರುತ್ತಿರುವುದು ಹೆಚ್ಚಿದೆ.

ಹುಣಸಗಿ ತಾಲ್ಲೂಕಿನ ಗ್ರಾಮಗಳಿಂದ ನಿತ್ಯವೂ ಅನೇಕ ವಾಹನಗಳು ಕೂಲಿಯಾಳು ತಂದರೂ ಎಲ್ಲ ಜಮೀನುಗಳಲ್ಲಿ ಹತ್ತಿ ಬಿಡಿಸಿ ತರುವುದು ಉಳಿದೇ ಇದೆ.

ಕಳೆದ ವರ್ಷ ಪ್ರತಿ ಕ್ವಿಂಟಲ್ ಗೆ ₹ 12 ಸಾವಿರದವರೆಗೆ ಮಾರಾಟವಾಗಿತ್ತು. ಈ ಬಾರಿ ಅದು ₹7ರಿಂದ ₹8 ಸಾವಿರಕ್ಕೆ ಬಂದು ತಲುಪಿದೆ. ರೈತರಿಗೆ ಆಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತಾಪಿಗಳು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ, ಪ್ರಸಕ್ತ ಸಾಲಿಗೆ 5200 ಹೆಕ್ಟೇರ್ ಮುಂಗಾರು ಬಿತ್ತನೆಯಲ್ಲಿ ಹತ್ತಿ ಬೆಳೆಯಿದೆ. ಅದರಲ್ಲಿ 3700 ಹೆಕ್ಟೆರ್ ಹಾನಿಯಾಗಿದ್ದು ಒಣ ಬೇಸಾಯ, ನೀರಾವರಿ ಕ್ಷೇತ್ರಗಳ ವಿಂಗಡಣೆ ನಡೆದಿದೆ. ಸರ್ಕಾರದ ವತಿಯಿಂದ ಪರಿಹಾರ ಒದಗಿಸಲು ತಂತ್ರಾಂಶದಲ್ಲಿ ರೈತರ ವಿವರ ನಮೂದಿಸಲಾಗಿದೆ ಇನ್ಶುರೆನ್ಸನವರ ಜೊತೆ ಮಾತನಾಡಿದ್ದು. ಅವರೂ ಕ್ಷೇತ್ರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.