ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಯಿಂದ ವಿಜಯಪುರ ನಗರ ಮತ್ತು ಬಬಲೇಶ್ವರದಲ್ಲಿ ತಲಾ ಮೂರು, ಮುದ್ದೇಬಿಹಾಳದಲ್ಲಿ ಆರು, ಬಸವನಬಾಗೇವಾಡಿ ನಾಲ್ಕು, ಇಂಡಿ ಮತ್ತು ತಾಳಿಕೋಟೆಯಲ್ಲಿ ತಲಾ ಒಂದು ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ 19 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮುದ್ದೇಬಿಹಾಳದಲ್ಲಿ ಎರಡು ಆಕಳು ಸಾವಿಗೀಡಾಗಿವೆ.
ಕೊಚ್ಚಿ ಹೋದ ಬೈಕ್:
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ-ವಿಜಯಪುರ ರಸ್ತೆಯಲ್ಲಿರುವ ಸಂಗಮನಾಥ ದೇವಸ್ಥಾನ ಬಳಿ ಸೇತುವೆ ಮೇಲೆ ಹಳ್ಳ ಉಕ್ಕಿ ಹರಿದಿದ್ದು, ಮುಳುಗಿದ್ದ ಸೇತುವೆ ಮೇಲೆ ಬೈಕಿನಲ್ಲಿ ದಾಟಲು ಮುಂದಾದ ಕಳ್ಳಕವಟಗಿ ಗ್ರಾಮದ ಶ್ರೀಶೈಲ ಗಿಡ್ನವರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬೈಕ್ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
ಉಕ್ಕಿ ಹರಿದ ನದಿ, ಹಳ್ಳಿ:
ಡೋಣಿ ನದಿ ಉಕ್ಕಿ ಹರಿದ ಪರಿಣಾಮ ಕೆಲವು ಕಡೆ ಹೊಲಗಳು ಜಲಾವೃತವಾಗಿದ್ದು, ಬೆಳೆ ಹಾನಿಯಾಗಿದೆ. ಜಿಲ್ಲೆಯ ಹಲವು ಹಳ್ಳ–ಕೊಳ್ಳಗಳು ಮೈದುಂಬಿ ಹರಿದವು. ರಸ್ತೆಗಳು ಜಲಾವೃತವಾದ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ವಿಜಯಪುರದಲ್ಲಿ ಅವಾಂತರ:
ಎರಡು ದಿನಗಳಿಂದ ವಿಜಯಪುರ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಸಂಪೂರ್ಣ ಜಲಾವೃತವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಇಡೀ ನಗರದ ನೀರು ಹಳ್ಳದಂತೆ ಹರಿದ ಪರಿಣಾಮ ಜಲಾವೃತವಾಗಿತ್ತು. ಫುಟ್‌ಬಾಲ್ ಕೋರ್ಟ್ ಒಳಗೆ ನೀರು ನಿಂತು ಕೆಸರುಮಯವಾಗಿತ್ತು.
ಕೇಂದ್ರ ಬಸ್ ನಿಲ್ದಾಣದ ಪಕ್ಕದ ನವಬಾಗ್ ರಸ್ತೆ ದುರಸ್ತಿ ಕಾರ್ಯಕ್ಕೆ ಅಗೆದು ಬಿಡಲಾಗಿದ್ದು, ತಗ್ಗು ಗುಂಡಿಗಳಲ್ಲಿ ಮಳೆ ನೀರಿನ ಜೊತೆಗೆ ಒಳಚರಂಡಿ ನೀರು ನಿಂತು ಈ ಭಾಗದ ನಿವಾಸಿಗಳಿಗೆ, ಅಂಗಡಿ, ಆಸ್ಪತ್ರೆ, ಕಚೇರಿಗಳಿಗೆ ತೊಂದರೆ ಆಯಿತು. ಬಡಿ ಕಮಾನ್ ರಸ್ತೆಯಲ್ಲೂ ಕೆಸರುಮಯ ವಾತಾವರಣ ನಿರ್ಮಾಣವಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹಳ್ಳದಂತೆ ಹರಿಯಿತು. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಯಿತು.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ 8 ಗಂಟೆ ವರೆಗೂ ಬಿಡದೇ ಮಳೆ ಸುರಿದ ಪರಿಣಾಮ ಕೆಲವು ಖಾಸಗಿ ಶಾಲೆಗಳು ಮಕ್ಕಳಿಗೆ ರಜೆ ನೀಡಲಾಗಿತ್ತು. ಬಹುತೇಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕಡಿಮೆ ಇತ್ತು.
ಮತ್ತೆ ಮಳೆ ಮುನ್ಸೂಚನೆ:
ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ತಾಸುಗಳಲ್ಲಿ ಸರಾಸರಿ 4.7 ಸೆಂ.ಮೀ.ಮಳೆಯಾಗಿದೆ. ಮುಂದಿನ 24 ತಾಸುಗಳಲ್ಲಿ ಮತ್ತಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಿಕೋಟಾದಲ್ಲಿ ಅತಿ ಹೆಚ್ಚು ಅಂದರೆ, 8 ಸೆಂ.ಮೀ. ಮಳೆಯಾಗಿದೆ, ಉಳಿದಂತೆ ವಿಜಯಪುರ ನಗರ 5.5, ಕೊಲ್ಹಾರ 6, ಮುದ್ದೇಬಿಹಾಳ 5.1, ನಿಡುಗುಂದಿ 6.3, ಹೂವಿನಹಿಪ್ಪರಗಿ 2.6, ಮನಗೂಳಿ 5.6, ಇಂಡಿ 5, ಚಡಚಣ 6.2, ಬಬಲೇಶ್ವರ 5.7, ಢವಳಗಿ 2.2, ಬಸವನ ಬಾಗೇವಾಡಿ 3.8, ಬಳ್ಳೊಳ್ಳಿ 6.1, ತಾಳಿಕೋಟೆ 1.5, ನಾಗಠಾಣ 3.5, ನಾಲತವಾಡ 3.9, ಸಿಂದಗಿ 2, ಮಮದಾಪುರ 4.6, ದೇವರ ಹಿಪ್ಪರಗಿ 4.4 ಸೆಂ.ಮೀ. ಮಳೆಯಾಗಿದೆ.
ಪರಿಹಾರ ಕಾರ್ಯ ಕೈಗೊಳ್ಳಿ: ಎಂ.ಬಿ. ಪಾಟೀಲ
ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ-ಹಾನಿಗೊಳಗಾಗುವ ಗ್ರಾಮ-ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರೀಶಿಲನೆ ನಡೆಸಿ ಕೂಡಲೇ ನಿಯಮಾನುಸಾರ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದಾರೆ. ಮಳೆಯಿಂದ ಯಾವುದೇ ಮಾನವ ಜೀವಹಾನಿ ಜಾನುವಾರು ಹಾನಿ ಮನೆಗಳ ಹಾನಿ ಬೆಳೆ ಹಾನಿ ಗೃಹೋಪಯೋಗಿ ವಸ್ತುಗಳ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಹಾನಿಗೊಳಗಾದಲ್ಲಿ ನಿಯಮಾನುಸಾರ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದ್ದಾರೆ. ಶಿಥಿಲಾವ್ಯವಸ್ಥೆಯಲ್ಲಿರುವ ಜಿಲ್ಲೆಯ ಅಂಗನವಾಡಿ ಹಾಗೂ ಶಾಲೆ ಕೊಠಡಿಗಳಿದ್ದಲ್ಲಿ ಕೂಡಲೇ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲು ಕ್ರಮವಹಿಸಿ ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ಯಾವುದೇ ತೊಂದರೆಯಾಗದಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.