ADVERTISEMENT

ಹೆರಿಗೆಗೆ ದಾಖಲಿಸಿಕೊಳ್ಳಲು ಹಿಂದೇಟು; ಮಗು ಸಾವು

ಬಬಲೇಶ್ವರದ ಗರ್ಭಿಣಿಗೆ ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ; ಪಾಲಕರ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮೇ 2021, 16:01 IST
Last Updated 17 ಮೇ 2021, 16:01 IST

ವಿಜಯಪುರ: ಹೆರಿಗೆಗಾಗಿ ಸೋಮವಾರ ಬೆಳಿಗ್ಗೆ ಕರೆತರಲಾಗಿದ್ದ ಬಬಲೇಶ್ವರ ಗ್ರಾಮದ ಗರ್ಭಿಣಿಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿದ ಕಾರಣ ಮಗು ಸಾವಿಗೀಡಾಗಿದೆ.

ಬಬಲೇಶ್ವರ ಗ್ರಾvijaಮದ ಹನುಮವ್ವ ನಾಗಪ್ಪ ಕೊರವರ (38) ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಅಂಬುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು, ಸಿಬ್ಬಂದಿ ದಾಖಲಿಸಿಕೊಳ್ಳಲು ಮೀನಾಮೇಷ ಮಾಡಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ಪರಿಸ್ಥಿತಿ ನೋಡಲಾಗದೇ ಬೇಸತ್ತ ಕುಟುಂಬದವರು ತಕ್ಷಣ ಆಟೊ ರಿಕ್ಷಾದಲ್ಲಿ ಜಲನಗರದಲ್ಲಿರುವ ಸಂಜೀವಿನಿ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ, ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಸಹ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಆಸ್ಪತ್ರೆ ಹೊರಭಾಗದಲ್ಲೇ ಕುಳಿತಿದ್ದ ಮಹಿಳೆಗೆ ಆ ಹೊತ್ತಿಗಾಗಲೇ ಹೆರಿಗೆ ಸಮಯವಾಗಿದ್ದು, ಮಗುವಿನ ಪಾದಗಳು ಹೊರಬಂದಿವೆ. ಆಗ ಎಚ್ಚೆತ್ತ ವೈದ್ಯರು ತಕ್ಷಣ ದಾಖಲಿಸಿಕೊಂಡು ಹೆರಿಗೆ ಮಾಡಿಸುವ ವೇಳೆಗಾಗಲೇ ಮಗು ಹೊಟ್ಟೆಯೊಳಗೆ ಸಾವಿಗೀಡಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಅವರು ಪ್ರಕರಣದ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಅವರಿಂದ ತನಿಖೆ ನಡೆಸಿ, ವರದಿ ಪಡೆದುಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ವರದಿ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ, ಹನುಮವ್ವ ಅವರು ಹೈ ರಿಸ್ಕಿ ಪ್ರಗ್ನೆನ್ಸಿ ಎಂದು ಈ ಮೊದಲೇ ವೈದ್ಯರಿಂದ ಗುರುತಿಸಲ್ಪಟ್ಟಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಹಿಳೆಗೆ ಸೋಮವಾರ ಮುಂಜಾನೆ 5.30ಕ್ಕೆಹೆರಿಗೆ ನೋವು ಕಾಣಿಸಿಕೊಂಡಿರುವುದರಿಂದ ಬಬಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ 108 ಅಂಬುಲೆನ್ಸ್ ಸಿಬ್ಬಂದಿ ಅವರ ಸಹಾಯ ಪಡೆದು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಗರ್ಭಿಣಿ ಹನುಮವ್ವ ಅವರಿಗೆ ಈ ಹಿಂದಿನ ಹೆರಿಗೆ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಮರಣ ಹೊಂದಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಲು ನಿರಾಕರಿಸಿದ್ದು, ನಂತರ ಗರ್ಭಿಣಿಯನ್ನು ಸಂಬಂಧಿಕರು ಜಲನಗರದ ಸಂಜೀವಿನಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೋವಿಡ್ ಸೋಂಕು ತಗಲಿರುವುದರಿಂದ ಅವರು ಗರ್ಭಿಣಿಯನ್ನು ದಾಖಲು ಮಾಡಿಕೊಳ್ಳದೇ ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.

ಅದೇ ವೇಳೆ ಗರ್ಭಿಣಿ ಆಸ್ಪತ್ರೆ ಹೊರಗೆ ಕುಳಿತಿರುವ ಸಂದರ್ಭದಲ್ಲಿ ಹೆರಿಗೆ ಪ್ರಾರಂಭವಾಗಿದ್ದು, ಶಿಶುವಿನ ಪಾದಗಳು ಆಚೆ ಬಂದಿವೆ. ಆಗ ವೈದ್ಯರ ನಿರ್ದೇಶನದಂತೆ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ಒಳರೋಗಿಯಾಗಿ ದಾಖಲೆ ಮಾಡಿಕೊಂಡಿದ್ದಾರೆ.

ಹೆರಿಗೆ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮರಣ ಹೊಂದಿದ್ದು, ತಾಯಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.