ವಿಜಯಪುರ: ‘ದೇಶದಾದ್ಯಂತ ಜೂನ್ 21ರಿಂದ ಹಿಂದೂ ಸುರಕ್ಷತಾ ಅಭಿಯಾನ ಆರಂಭಿಸಲಾಗುವುದು’ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಡಾ.ಪ್ರವೀಣ ತೊಗಾಡಿಯಾ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಸುರಕ್ಷತಾ ಅಭಿಯಾನವು ದೇಶದಲ್ಲಿ ಬ್ರಹ್ಮೋಸ್ ಮಿಸೈಲ್‌ನಂತೆ ಹಿಂದುಗಳಿಗೆ ಶಕ್ತಿ ನೀಡಲಿದೆ. ಭಾರತ ಹಿಂದೂ ರಾಷ್ಟ್ರವಾಗಬೇಕು, ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ, ದೇಶದಲ್ಲಿ ಹಿಂದೂಗಳನ್ನು ಬಹು ಸಂಖ್ಯಾತರನ್ನಾಗಿ ಮಾಡುವುದೇ ನಮ್ಮ ಅಭಿಯಾನದ ಮುಖ್ಯ ಉದ್ದೇಶ’ ಎಂದು ಹೇಳಿದರು.
‘ಸಂಘಟನೆಯಿಂದ ಪ್ರತಿ ಶನಿವಾರ ದೇವಸ್ಥಾನಗಳು, ಮನೆ, ಮನೆಗಳಲ್ಲಿ ಹನುಮಾನ್ ಚಾಲಿಸ್ ಪಠಿಸಲಾಗುವುದು, ಹಿಂದೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಭರಿಸಲು ನೆರವು ನೀಡಲಾಗುವುದು, ಹಿಂದುಗಳು ಹಿಂದೂಗಳ ಬಳಿಯೇ ವ್ಯಾಪಾರ, ವಹಿವಾಟು ನಡೆಸಲು ಜಾಗೃತಿ ಮೂಡಿಸಲಾಗುವುದು, ಹಿಂದುಗಳಿಗೆ ಉದ್ಯೋಗವಕಾಶ ಒದಗಿಸಲು ಜಾಗೃತಿ ಮೂಡಿಸಲಾಗುವುದು’ ಎಂದರು.
‘ಬಾಂಗ್ಲಾ ನುಸುಳುಕೋರರನ್ನು ದೇಶದಿಂದ ಹೊರಹಾಕಲು ಒತ್ತಾಯಿಸಿ ಸಂಘಟನೆಯಿಂದ ಪ್ರತಿಭಟನೆ ಆಯೋಜಿಸಲಾಗುವುದು, ದೇಶದಲ್ಲೆಡೆ ಹಿಂದುಗಳ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲಾಗುವುದು’ ಎಂದು ತಿಳಿಸಿದರು.
ಶಿಕ್ಷಣ ದುಬಾರಿ:
‘ದೇಶದಲ್ಲಿ ಶಿಕ್ಷಣ ದುಬಾರಿಯಾಗಿದೆ. ಇಂದು ವೈದ್ಯಕೀಯ ಸೀಟುಗಳಿಗೆ ₹50 ಲಕ್ಷ ಭರಿಸಬೇಕಾಗಿರುವ ಸ್ಥಿತಿ ಇದೆ. ಹೀಗಾದರೆ ಬಡವರ ಮಕ್ಕಳು ವೈದ್ಯರಾಗುವುದು ಕಷ್ಟ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ, ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಆಡಳಿತ ವೈಕರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಇಬ್ಬರೂ ಸಮರ್ಥ ನಾಯಕರಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ’ ಎಂದು ಹೇಳಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ ಕುಲಕರ್ಣಿ, ಪ್ರದೀಪ ಗೌರ, ಗಂಗಾಧರ, ಮಲ್ಲಿಕಾರ್ಜುನ ಅಡ್ವಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.