ವಿಜಯಪುರ: ದೇವರಹಿಪ್ಪರಗಿ ತಾಲ್ಲೂಕಿನ ತಿಳಗುಳ ಗ್ರಾಮದಲ್ಲಿ ಹಾಗೂ ಇಂಡಿ ಪಟ್ಟಣದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿರುವ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಿಳಗುಳ ಗ್ರಾಮದಲ್ಲಿ ಟಾಟಾ ಎಸಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ 7 ಪ್ಲಾಸ್ಟಿಕ್ ಚೀಲ್‍ಗಳಲ್ಲಿ ತುಂಬಿರುವ ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು, ವಾಹನ ಚಾಲಕ ಸೈಫನ್ ಆಲಮೇಲ ಮೇಲೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂಡಿ ಪಟ್ಟಣದ ಕುಂಬಾರ ಓಣಿಯ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ₹75,110 ಮೌಲ್ಯದ 2590 ಕೆ.ಜಿ. ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದು, ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಿಳಗೂಳ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ದೇವರಹಿಪ್ಪರಗಿ ಆಹಾರ ನಿರೀಕ್ಷಕ ಅಮೋಘ ದಳವಾಯಿ ಹಾಗೂ ಇಂಡಿ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಅವರು ನೇತೃತ್ವ ವಹಿಸಿದ್ದರು ಎಂದು ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.