ADVERTISEMENT

ನವೀಕೃತ ಅಂಬೇಡ್ಕರ್‌ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:11 IST
Last Updated 14 ಏಪ್ರಿಲ್ 2025, 16:11 IST
ವಿಜಯಪುರ ನಗರದ ನವೀಕರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಭವನ, ಗ್ರಂಥಾಲಯವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಅಂಬೇಡ್ಕರ್ ಅವರ ಕುರಿತ ಸಂದೇಶ ಸಾರುವ ಛಾಯಾಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವೀಕ್ಷಿಸಿದರು. ಮಾಜಿ ಶಾಸಕ ಪ್ರೊ. ರಾಜು ಆಲಗೂರ ಹಾಜರಿದ್ದರು
ವಿಜಯಪುರ ನಗರದ ನವೀಕರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಭವನ, ಗ್ರಂಥಾಲಯವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಅಂಬೇಡ್ಕರ್ ಅವರ ಕುರಿತ ಸಂದೇಶ ಸಾರುವ ಛಾಯಾಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವೀಕ್ಷಿಸಿದರು. ಮಾಜಿ ಶಾಸಕ ಪ್ರೊ. ರಾಜು ಆಲಗೂರ ಹಾಜರಿದ್ದರು   

ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದ ಎದುರು ನವೀಕರಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಭವನ, ಗ್ರಂಥಾಲಯ ಹಾಗೂ ಅಂಬೇಡ್ಕರ್ ಅವರ ಕುರಿತ ಸಂದೇಶ ಸಾರುವ ಛಾಯಾಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅನಾವರಣಗೊಳಿಸಿದರು.

‘ವಿಶ್ವದ ಸರ್ವಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನಿಗೆ ಕೊಡುಗೆ ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ಅಂಬೇಡ್ಕರ್ ಅವರು ಭದ್ರ ಬುನಾದಿ ಹಾಕಿದ್ದಾರೆ’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು. 

‘ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು. ಜಾತಿ, ಮತ ಪಂಥಗಳನ್ನು ಮೀರಿ ನಿಂತ ಮೇಧಾವಿಗಳಾಗಿದ್ದಾರೆ’ ಎಂದರು.

ADVERTISEMENT

ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಕೇವಲ 20 ದಿನಗಳಲ್ಲಿ ಅಂಬೇಡ್ಕರ್ ಭವನವನ್ನು ನವೀಕರಣಗೊಳಿಸಲಾಗಿದೆ ಎಂದು ಹೇಳಿದರು.

ನವೀಕರಣಗೊಂಡ ಭವನದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆ ಸಮಗ್ರ ಚಿತ್ರಣ ಕಟ್ಟಿಕೊಡುವ ಛಾಯಾಚಿತ್ರ, ವಸ್ತು ಸಂಗ್ರಹಾಲಯ, ಸುಸಜ್ಜಿತ ಗ್ರಂಥಾಲಯ, ಬದುಕು-ಬರಹ 22 ಸಂಪುಟಗಳು, ಜೀವನ ಚರಿತ್ರೆ, ಸಾಧನೆಗಳ ಕುರಿತ ಪುಸ್ತಕಗಳು, ಸುಸಜ್ಜಿತ ಕಚೇರಿ, ಸಭಾಭವನ ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯದಲ್ಲಿ ಪುಸ್ತಕ ಇರಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. 

ಚಿಂತಕಿ ಕೆ. ನೀಲಾ ಮಾತನಾಡಿ, ‘ಜನರು ಘನತೆಯಿಂದ ಬದುಕಲು ಆರ್ಥಿಕ ಸ್ವಾತಂತ್ರ ಇರಬೇಕು ಎಂಬುದು ಅಂಬೇಡ್ಕರ್ ಅವರ ಉದಾತ್ತ ಚಿಂತನೆಯಾಗಿತ್ತು. ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಂಬೇಡ್ಕರ್, ಸ್ತ್ರೀ ಸಬಲೀಕರಣಕ್ಕಾಗಿ ಹೊಂದಿದ ವಿಚಾರಗಳನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದು’ ಎಂದು ಹೇಳಿದರು. 

ಬಸವತತ್ವ ಪ್ರಚಾರಕರಾದ ಡಾ. ಜೆ.ಎಸ್.ಪಾಟೀಲ ಉಪನ್ಯಾಸ ನೀಡಿದರು. 

ಅಂಬೇಡ್ಕರ್ ಭವನ ನವೀಕರಣಕ್ಕೆ ವಿಶೇಷ ಮುತುವರ್ಜಿ ವಹಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್. ಮಲಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ನಿರ್ಮಿತಿ ಕೇಂದ್ರದ ಆಕಾಶ್‌ ಅವರನ್ನು ಸನ್ಮಾನಿಸಲಾಯಿತು.

ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.

ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ  ರಾಜು ಆಲಗೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾಇ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಇದ್ದರು. 

ಭವ್ಯ ಮೆರವಣಿಗೆ: ಜಲನಗರದ ಬುದ್ದವಿಹಾರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.