ADVERTISEMENT

ಕೊಲ್ಹಾರ: ಆದಾಯ ತಂದ ಸಮಗ್ರ ಕೃಷಿ

ಮುಳವಾಡದ ಸಂಗಮೇಶರಿಂದ ಸಾವಯವ ಕೃಷಿ ಪದ್ಧತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 4:23 IST
Last Updated 6 ಜೂನ್ 2025, 4:23 IST
ಮುಳವಾಡದ ಯುವ ರೈತ ಸಂಗಮೇಶ ಅವರ ಹೊಲದಲ್ಲಿ ಇರುವ ಕೃಷಿ ಹೊಂಡದ ಮದ್ಯದಲ್ಲಿ ಕೋಳಿ, ಪಕ್ಷಿ ಸಾಕಾಣಿಕೆ ಕೇಂದ್ರ
ಮುಳವಾಡದ ಯುವ ರೈತ ಸಂಗಮೇಶ ಅವರ ಹೊಲದಲ್ಲಿ ಇರುವ ಕೃಷಿ ಹೊಂಡದ ಮದ್ಯದಲ್ಲಿ ಕೋಳಿ, ಪಕ್ಷಿ ಸಾಕಾಣಿಕೆ ಕೇಂದ್ರ   

ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದ ಪದವೀಧರ ಯುವ ಕೃಷಿಕ ಸಂಗಮೇಶ ಬಿಜಾಪುರ ಸಾವಯವ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಡಿ, ಹೆಚ್ಚು ಆದಾಯ ಪಡೆಯುತ್ತಿದ್ದಾರೆ.

ಸಂಗಮೇಶ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ, ಸಮಗ್ರ ಕೃಷಿ ಕೈಗೊಂಡಿದ್ದಾರೆ. ಅರಣ್ಯ ಕೃಷಿ, ಸಾವಯವ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಪಕ್ಷಿ ಸಾಕಾಣಿಕೆ, ಮೊಲ ಸಾಕಾಣಿಕೆ ಹೀಗೆ ಸಾವಯವ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಡಿ ವಾರ್ಷಿಕ ₹ 5 ರಿಂದ ₹ 6 ಲಕ್ಷ  ಲಾಭ ಪಡೆಯುತ್ತಿದ್ದಾರೆ. ಜಿಲ್ಲೆಯ ರೈತರಿಗೆ ಮಾಹಿತಿ, ಮಾರ್ಗದರ್ಶನ ಪ್ರೋತ್ಸಾಹ ನೀಡುತ್ತಿದ್ದಾರೆ.

ಒಂದೂವರೆ ಎಕರೆ ಜಮೀನಿನಲ್ಲಿ ಅರಣ್ಯ ಕೃಷಿಯಲ್ಲಿ 600 ಮಹಾಗನಿ ಮರಗಳು, 60 ಬಲುಳ ಕಾಯಿ ಗಿಡಗಳು ಸೇರಿದಂತೆ ನೂರಾರು ಅರಣ್ಯ ಗಿಡಮರಗಳನ್ನು ಬೆಳೆಸಿದ್ದಾರೆ. ಸಿರಿಧಾನ್ಯಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದು ವಾರ್ಷಿಕ ₹1 ಲಕ್ಷ ವರೆಗೆ ಆದಾಯ ಗಳಿಸುತ್ತಿದ್ದಾರೆ.

ADVERTISEMENT

ತೋಟಗಾರಿಕೆ ಬೆಳೆಗಳಾದ ಸೀತಾಫಲ, ಪೇರು ಗಿಡಗಳನ್ನು ಬೆಳೆಸಿ ಅದರಿಂದ ಲಕ್ಷಾಂತರ ರೂಪಾಯಿಗಳ ಲಾಭ ಪಡೆದು ಕೊಂಡಿದ್ದಾರೆ. ಕೃಷಿ ಹೊಂಡದ ನೀರಿನ ಮೇಲೆ ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಕೋಳಿ ಸಾಕಾಣಿಕೆ ಮಾಡಿ ಅದರಿಂದ ವಾರ್ಷಿಕ ₹ 60 ಸಾವಿರ ಆದಾಯ ಪಡೆಯುತ್ತಿದ್ದಾರೆ.

‌ಕೃಷಿ ಹೊಂಡದಲ್ಲಿ 3000 ಮೀನು ಮರಿಗಳ ಸಾಕಾಣಿಕೆ ಮಾಡಿ ವಾರ್ಷಿಕ ₹ 80 ರಿಂದ ₹1 ಲಕ್ಷ ಆದಾಯ  ಪಡೆಯುತ್ತಿದ್ದಾರೆ. ತಮ್ಮ ಹವ್ಯಾಸ ಮತ್ತು ವ್ಯಾಪಾರ ದೃಷ್ಟಿಯಿಂದ ವಿವಿಧ ಜಾತಿಯ ಗಿಳಿ ಪಾರಿವಾಳ ಸಾಕಾಣಿಕೆ ಮಾಡಿ, ಅದರಿಂದ ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ತೋಟದಲ್ಲಿ ಬೆಳೆಯುವ ಬೆಳೆಗಳು ಹೆಚ್ಚು ಇಳುವರಿ ಪಡೆಯಲು ಮತ್ತು ಆದಾಯ ಪಡೆಯಲು 16 ಜೇನು ಪೆಟ್ಟಿಗೆಗಳನ್ನು ಇಟ್ಟು ಅದರಿಂದ ವಾರ್ಷಿಕ ₹1 ಲಕ್ಷದವರೆಗೆ ಲಾಭ ಗಳಿಸುತ್ತಾರೆ.

ಮೊಲಗಳ ಸಾಕಾಣಿಕೆ ಮಾಡಿದ್ದು, ಯಾವುದೇ ಖರ್ಚಿಲ್ಲದೆ ತಮ್ಮ ತೋಟದಲ್ಲಿ ಬೆಳೆಯುವ ಹುಲ್ಲು ಹಾಕಿ ಸಾಕಾಣಿಕೆ ಮಾಡಿ ಸಾವಿರಾರು ರೂಪಾಯಿ ಪಡೆಯುತ್ತಿದ್ದಾರೆ.

50 ಟಗರು ಸಾಕಾಣಿಕೆ ಮಾಡಿ, ಈ ಟಗರುಗಳನ್ನು ಮೂರು ತಿಂಗಳಿಗೆ ಒಮ್ಮೆ ಮಾರಾಟ ಮಾಡಿ ₹1.30 ಲಕ್ಷ ಆದಾಯ  ಗಳಿಸುತ್ತಿದ್ದಾರೆ. ಜೊತೆಗೆ  ಜವಾರಿ ಹಸುಗಳು, ಹೋರಿಗಳು ಸಾಕುತ್ತಿದ್ದಾರೆ.

ಎರಡೂವರೆ ಎಕರೆ ಜಮೀನಿನಲ್ಲಿ ಒಂದು ಕೊಳವೆಬಾವಿ ಇದ್ದು, ಅದರಿಂದ ಹನಿ ನೀರಾವರಿ ಪದ್ಧತಿ ಮೂಲಕ ವ್ಯವಸಾಯ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಾವೇ ತಲುಪಿಸುತ್ತಿದ್ದಾರೆ. ಜೊತೆಗೆ ಸಿರಿಧಾನ್ಯಗಳ ಮಳಿಗೆಯವರು ಬಂದು ತೆಗೆದುಕೊಂಡು ಹೋಗುತ್ತಾರೆ.

 ಜೇನು ಸಾಕಾಣಿಕೆಯಲ್ಲಿ ತೊಡಗಿರುವ ರೈತ ಸಂಗಮೇಶ ಬಿಜಾಪುರ 
ಮುಂದಿನ ಪೀಳಿಗೆಗೆ ಉತ್ತಮ ಭೂಮಿ ಉತ್ತಮ ಆರೋಗ್ಯ ಆದಾಯಕ್ಕೆ ಸಮಗ್ರ ಸಾವಯವ ಕೃಷಿ ಮಾಡಬೇಕು ಎಂಬುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ನಾನು ಕೃಷಿ ಮಾಡಿ ರೈತರಿಗೆ ಉಚಿತ ಮಾಹಿತಿ ನೀಡುತ್ತಿದ್ದೇನೆ
ಸಂಗಮೇಶ ಬಿಜಾಪುರ ರೈತ ಮುಳವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.