ADVERTISEMENT

‘ಗುಮ್ಮಟ ನಗರ’ದಲ್ಲಿ ಗಾಣದ ಎಣ್ಣೆಗೆ ಹೆಚ್ಚಿದ ಬೇಡಿಕೆ

ಪಾರಂಪರಿಕ ವಿಧಾನದಿಂದ ತೆಗೆದ ಶೇಂಗಾ, ಕುಸುಬಿ, ಕೊಬ್ಬರಿ, ಎಳ್ಳೆಣ್ಣೆ

ಬಸವರಾಜ ಸಂಪಳ್ಳಿ
Published 16 ಜೂನ್ 2022, 19:30 IST
Last Updated 16 ಜೂನ್ 2022, 19:30 IST
ಕಟ್ಟಿಗೆ ಗಾಣದಿಂದ ತಯಾರಿಸಿರುವ ಶೇಂಗಾ ಮತ್ತು ಕುಸುಬಿ, ಕೊಬ್ಬರಿ ಎಣ್ಣೆ ಬಾಟಲಿಗಳು–ಪ್ರಜಾವಾಣಿ ಚಿತ್ರ
ಕಟ್ಟಿಗೆ ಗಾಣದಿಂದ ತಯಾರಿಸಿರುವ ಶೇಂಗಾ ಮತ್ತು ಕುಸುಬಿ, ಕೊಬ್ಬರಿ ಎಣ್ಣೆ ಬಾಟಲಿಗಳು–ಪ್ರಜಾವಾಣಿ ಚಿತ್ರ   

ವಿಜಯಪುರ: ‘ಗುಮ್ಮಟ ನಗರಿ’ಯಲ್ಲಿ ದಿನದಿಂದ ದಿನಕ್ಕೆ ಗಾಣದ ಎಣ್ಣೆಗೆ ಬೇಡಿಕೆ ಹೆಚ್ಚಾಗತೊಡಗಿದೆ. ಅದರಲ್ಲೂ ಪಾರಂಪರಿಕ ವಿಧಾನವಾದ ಮರದ ಗಾಣದಲ್ಲಿ ತೆಗೆದ ಶೇಂಗಾ, ಕುಸುಬಿ, ಕೊಬ್ಬರಿ, ಎಳ್ಳು, ಸಾಸಿವೆ, ಔಡಲ ಎಣ್ಣೆಗೆ ಜನರು ಮೊರೆ ಹೋಗುತ್ತಿದ್ದಾರೆ.

ಹೌದು, ಪ್ಲಾಸ್ಟಿಕ್‌ ಪ್ಯಾಕ್‌ನಲ್ಲಿ ಕಡಿಮೆ ದರಕ್ಕೆ ಸಿಗುವ ಸಂಸ್ಕರಿತ (ರಿಫೈನ್ಡ್‌) ಎಣ್ಣೆಗಳು ಕಲಬೆರೆಕೆಯಿಂದ ಕೂಡಿರುವುದರಿಂದ ಎಚ್ಚೆತ್ತಿರುವ ಜನರು ಯಾವುದೇ ಕಲಬೆರಕೆ ಇಲ್ಲದ ಗಾಣದ ಎಣ್ಣೆಗಳನ್ನು ಖರೀದಿಸಲು ಆದ್ಯತೆ ನೀಡತೊಡಗಿದ್ದಾರೆ.

ದರ ತುಸು ಹೆಚ್ಚೆನಿಸಿದರೂ ಸಹ ಶುದ್ಧವಾದ ಗಾಣದ ಎಣ್ಣೆಯನ್ನು ಆರೋಗ್ಯದ ದೃಷ್ಟಿಯಿಂದ ಜನರು ಆದ್ಯತೆ ಮೇರೆಗೆ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ ಎನ್ನುತ್ತಾರೆ ವಿಜಯಪುರ ರಾಮಮಂದಿರ ರಸ್ತೆಯಲ್ಲಿ ಕಟ್ಟಿಗೆಗಾಣದ ಎಣ್ಣೆಯ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ‘ಮುದ್ರಾ ನ್ಯಾಚುರಲ್ಸ್‌‘ನ ಮಾಲೀಕರಾದ ಸವಿತಾ ಶಶಿಕಾಂತ ತೇಲಿ.

ADVERTISEMENT

ಸ್ವತಃ ಗ್ರಾಹಕರೇ ಗಾಣದ ಎಣ್ಣೆ ಅಂಗಡಿಗೆ ಖುದ್ದು ಭೇಟಿ ನೀಡಿ ಒಂದು ತಿಂಗಳಿಗೆ ಮನೆಗೆ ಬೇಕಾಗುವಷ್ಟು ಖರೀದಿಸುತ್ತಾರೆ.ಪ್ರತಿ ತಿಂಗಳು ಒಂದು ಸಾವಿರ ಲೀಟರ್‌ ಗಾಣದ ಎಣ್ಣೆ ವ್ಯಾಪಾರವಾಗುತ್ತಿದೆ ಎಂದು ಅವರು ಹೇಳಿದರು.

ಕಟ್ಟಿಗೆ ಗಾಣದಿಂದ ಎಣ್ಣೆ ತಯಾರಿಸುವುದರಿಂದ(ಕೋಲ್ಡ್‌ ಪ್ರೆಸ್ಸ್‌ಡ್‌) ಎಣ್ಣೆ ಹೊರಬರುವಾಗ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಶಾಖ ಇರುವುದರಿಂದ ಎಣ್ಣೆಯಲ್ಲಿ ವಿಟಮಿನ್ಸ್‌ ಮತ್ತು ಖನಿಜಾಂಶಗಳು, ಫೈಟೋ ಸ್ಟಿರಾಲ್‌ಗಳು, ಆ್ಯಂಟಿ ಆಕ್ಸಿಡೆಂಟ್‌, ಪ್ರೋಟಿನ್‌, ಅಮಿನೊ ಆಮ್ಲಗಳು ಹೆಚ್ಚಿರುತ್ತವೆ. ಅಲ್ಲದೇ ಕೋಲೆಸ್ಟ್ರಾಲ್‌ ಪ್ರಮಾಣವೂ ಕಡಿಮೆ ಇರುತ್ತದೆ. ರಕ್ತನಾಳ, ಹೃದಯ ನಾಳಗಳಿಗೆ ಮೆಗ್ನಿಸಿಯಂ ದೊರಕುತ್ತದೆ. ಹೀಗಾಗಿ ಗಾಣದ ಎಣ್ಣೆ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುತ್ತಾರೆ ಅವರು.

ಸಂಸ್ಕರಿಸಿದ (ರಿಫೈಂಡ್‌) ಎಣ್ಣೆಯಲ್ಲಿ ಬರೀ ಕೊಬ್ಬಿನಾಂಶ ಹೆಚ್ಚಿರುವುದರಿಂದ ಜೀರ್ಣಹೊಂದದೇ ಬೊಜ್ಜು, ದಢೂತಿ ದೇಹ, ಸಕ್ಕರೆ ಕಾಯಿಲೆ, ಹೃದಯದ ತೊಂದರೆ, ಸಂತಾನಹೀನತೆಯಂತಹ ಕಾಯಿಲೆಗಳು ಅಂಟಿಕೊಳ್ಳುತ್ತವೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಸಿಗುವ ಫುಡ್‌ಗ್ರೇಡ್‌ ಮಿನರಲ್ಸ್‌ ಎಣ್ಣೆಗಳು ಆರೋಗ್ಯಕ್ಕೆ ಮಾರಕ. ಫುಡ್‌ಗ್ರೇಡ್‌ ಎಂಬ ಹೆಸರಿಟ್ಟು ಮೋಸ ಮಾಡುತ್ತಾರೆ. ಈ ಎಣ್ಣೆಯಲ್ಲಿ ಹೃದಯ, ಕಿಡ್ನಿ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್‌ಕಾರಕ ಅಂಶಗಳು ಹೆಚ್ಚಿರುತ್ತದೆ. ಹೀಗಾಗಿ ಕಡಿಮೆ ದರಕ್ಕೆ ಲಭಿಸಿದರೂ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಮಿನರಲ್‌ ಆಯಿಲ್‌ ಬಳಸುವುದರಿಂದ ಕರುಳಿನ ಸೆಳೆತ, ಜಠರವಾಯು, ಹೊಟ್ಟೆ ಊದಿಕೊಳ್ಳುವುದು ಮತ್ತು ಅತಿಸಾರ ಉಂಟಾಗುತ್ತದೆ. ಮಕ್ಕಳ ಆರೋಗ್ಯದ ಮೇಲೆಂತೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೇಕ್‌ ಇನ್‌ ಇಂಡಿಯಾ, ವೋಕಲ್‌ ಫಾರ್‌ ಲೋಕಲ್‌ ಹಾಗೂ ರಾಜೀವ್‌ ದೀಕ್ಷಿತ್‌ ಅವರ ಸ್ವದೇಶಿ ಜಾಗರಣ ಮಂಚ್‌ನಿಂದ ಪ್ರೇರಣೆಗೊಂಡ ವಿಜಯಪುರದ ಶಶಿಕಾಂತ ತೇಲಿ, ಸವಿತಾ ಅಂಗಡಿ ಮತ್ತು ಸೌಮ್ಯ ಬಸವರಾಜ ಅಂಗಡಿ ಜೊತೆಗೂಡಿ ವಿಜಯಪುರದಲ್ಲಿ ಕಟ್ಟಿಗೆ ಗಾಣದ ಎಣ್ಣೆ ತಯಾರಿಸುವ ‘ಮುದ್ರಾ ನ್ಯಾಚುರಲ್ಸ್‌’ ಆರಂಭಿಸಲಾಗಿದೆ. ಇದರಿಂದ ಲಾಭ ಮಾಡಬೇಕು ಎಂಬ ಉದ್ದೇಶವಿಲ್ಲ. ನೈಸರ್ಗಿಕವಾಗಿ ತೆಗೆದ ಗುಣಮಟ್ಟದ ಎಣ್ಣೆಯನ್ನು ಜನರಿಗೆ ನೀಡಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದರು.

ಕಟ್ಟಿಗೆ ಗಾಣದ ಎಣ್ಣೆ ಬೇಕಾದವರು ಮುದ್ರಾ ನ್ಯಾಚುರಲ್ಸ್‌, ರಾಮಭಟ್ಟ ಮನೆ ಎದುರು, ರಾಮಮಂದಿರ ರಸ್ತೆ, ಮೊಬೈಲ್‌ ಸಂಖ್ಯೆ 9019837056 ಸಂಪರ್ಕಿಸಬಹುದು ಎನ್ನುತ್ತಾರೆ ಅವರು.

***

ಗಾಣದಿಂದ ತಯಾರಿಸಿದ ಎಣ್ಣೆಯೇ ತಿನ್ನಲು ಯೋಗ್ಯ ಮತ್ತು ಶ್ರೇಷ್ಠ. ಗಾಣದ ಎಣ್ಣೆ ಎಲ್ಲ ಪೋಷಕಾಂಶ ಒಳಗೊಂಡಿರುವುದರಿಂದ ಸದೃಡ ಆರೋಗ್ಯಕ್ಕೆ ಪೂರಕ

–ಸವಿತಾ ಶಶಿಕಾಂತ ತೇಲಿ

ಮಾಲೀಕರು, ಮುದ್ರಾ ನ್ಯಾಚುರಲ್ಸ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.