ಇಂಡಿ: ತಾಲ್ಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲೇ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಈಗಾಗಲೇ 39 ಗ್ರಾಮಗಳಿಗೆ 159 ಟ್ಯಾಂಕರ್‌ಗಳ ಮೂಲಕ 456 ಟ್ರಿಪ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣಕ್ಕೆ ಬರಗುಡಿ ಗ್ರಾಮದ ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವಾರಕ್ಕೊಮ್ಮೆ ನಲ್ಲಿಗಳ ಮೂಲಕ ನೀರು ಬಿಡಲಾಗುವುದು. ಇಂಡಿ ಪಟ್ಟಣದಲ್ಲಿ ಅಲ್ಲಲ್ಲಿ ಕೊಳವೆ ಬಾವಿಗಳಿದ್ದು, ಅವುಗಳಿಗೆ ಸಣ್ಣ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪುರಸಭೆಯ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ತಿಳಿಸಿದ್ದಾರೆ.
‘ಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಬೇಕಾದರೆ ಕೃಷ್ಣಾ ಕಾಲುವೆಗೆ ನೀರು ಹರಿಸಬೇಕು. ಆ ಕಾಲುವೆಯಿಂದ ಬರಗುಡಿ ಗ್ರಾಮದ ಕೆರೆ ತುಂಬಿಸಿಕೊಳ್ಳುತ್ತೇವೆ. ಆ ಕೆರೆಯಿಂದ ಇಂಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕಿನ ನಿಂಬಾಳ, ಹಂಜಗಿ, ಭತಗುಣಕಿ, ಅರ್ಜನಾಳ, ಮಾವಿನಹಳ್ಳಿ, ಸಾವಳಸಂಗ, ನಂದರಗಿ, ಕೊಳೂರಗಿ, ತಡವಲಗಾ, ಹೊರ್ತಿ, ಝಳಕಿ, ಬೂದಿಹಾಳ ಮುಂತಾದ ಗ್ರಾಮಗಳಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಟ್ಯಾಂಕರ್ ಮೂಲಕ ತಪ್ಪದೇ ನೀರು ಒದಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಯಾವ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂಬ ಬಗ್ಗೆ ನಿಗಾ ವಹಿಸಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರ ಸೂಚನೆ ಬಂದರೆ ತಕ್ಷಣವೇ ಟ್ಯಾಂಕರ್ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಸಂತೋಷ ಹೊಟಗಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.