ಇಂಡಿ: ‘ನಿಂಬೆ ಬೆಳೆಗೆ ಮೌಲ್ಯವರ್ಧನೆ ಮೂಲಕ ಉಪ್ಪಿನಕಾಯಿ, ಜ್ಯೂಸ್, ಪುಡಿ, ಚಹಾಪುಡಿ ಮಾಡಿದರೆ ರೈತರು ಅಧಿಕ ಲಾಭ ಪಡೆಯಬಹುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಆಡಳಿತಸೌಧದ ಆವರಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ರಾಜ್ಯ ನಿಂಬೆ ಅಭಿವೃದ್ಧಿ ನಿಗಮ ನಿರ್ಮಿಸಿದ ಲೆಮನ್ ಟೀ ಪಾಯಿಂಟ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
‘ಅತಿ ಹೆಚ್ಚು ನಿಂಬೆ ಬೆಳೆಯುವ ಇಂಡಿ ಪಟ್ಟಣದಲ್ಲಿ, ರಾಜ್ಯ ಮಟ್ಟದ ನಿಂಬೆ ಅಭಿವೃದ್ದಿ ಮಂಡಳಿ ಕಚೇರಿ ಆರಂಭಿಸಲಾಗಿದೆ. ಈ ಭಾಗದ ನಿಂಬೆಗೆ ರಾಜ್ಯಮಟ್ಟದ ಸ್ಥಾನಮಾನ ದೊರೆಯುವಂತೆ ಮಾಡಲಾಗಿದೆ. ನಿಂಬೆ ಆನ್‌ಲೈನ್ ಮಾರಾಟಕ್ಕೂ ಪ್ರಯತ್ನಿಸಲಾಗುತ್ತಿದೆ’ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ್ ಬಿ.ಎಸ್. ಕಡಕಬಾವಿ, ಅರಣ್ಯ ಅಧಿಕಾರಿ ಎಸ್.ಜಿ. ಸಂಗಾಲಕ, ಮಂಜುನಾಥ ಧುಳೆ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಪಶು ಸಂಗೋಪನಾ ಇಲಾಖೆಯ ವೈದ್ಯ ರಾಜಕುಮಾರ ಅಡಕಿ, ನಿಂಬೆ ಅಭಿವೃದ್ಧಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.
‘ವಿವಿಧೆಡೆ ಮಳಿಗೆ ಆರಂಭ’ ‘ಸದ್ಯ ಲೇಮನ್ ಟೀ ಪಾಯಿಂಟ್ ಪ್ರಾರಂಭಿಸಲಾಗಿದ್ದು ಮುಂಬರುವ ದಿನಗಳಲ್ಲಿ ಬೆಂಗಳೂರಿನ ಯಶವಂತಪುರ ಸೇರಿದಂತೆ ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಿಂಬೆ ಅಭಿವೃದ್ದಿ ಮಂಡಳಿಯಿಂದ ಇಂತಹ ಮಳಿಗೆಗಳನ್ನು ಪ್ರಾರಂಭಿಸಲಾಗುವುದು’ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಪಾಟೀಲ ಹೇಳಿದರು. ‘ಸದ್ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರೈತರ ಸಂಘಗಳನ್ನು ರಚಿಸಿ ಅವುಗಳಿಂದ ನಿಂಬೆ ಉಪ್ಪಿನಕಾಯಿ ಜ್ಯೂಸ್‌ಪುಡಿ ಲೆಮನ್ ಟೀ ಪುಡಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ಉತ್ಪಾದಕ ಘಟಕಗಳನ್ನು ಆರಂಭಿಸಲಾಗುವುದು. ಇದರಿಂದ ರೈತರಿಗೆ ಹೆಚ್ಚು ಆದಾಯ ಸಿಗಲು ಅನುಕೂಲವಾಗುತ್ತದೆ’ ಎಂದರು. ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.