ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಉದ್ಘಾಟಿಸಿದರು.
‘ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ₹ 48 ಲಕ್ಷ ಮೊತ್ತದ ಕಟ್ಟಡ, ₹12.05 ಲಕ್ಷ ಮೊತ್ತದ ಅಡುಗೆ ಸಲಕರಣೆಗಳ ಮೊತ್ತ ಸೇರಿದಂತೆ ₹60.05 ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ ಎಂದು ಸಚಿವರು ಹೇಳಿದರು.
ಇಂದಿರಾ ಕ್ಯಾಂಟಿನ್‍ನಲ್ಲಿ ಉತ್ತಮ ರುಚಿ-ಶುಚಿಯಾದ ಗುಣಮಟ್ಟದ ಆಹಾರ ಲಭ್ಯವಾಗಲಿದ್ದು, ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ ಎಂದರು.
ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಆಹಾರ ಗುಣಮಟ್ಟವನ್ನು ಪರೀಕ್ಷಿಸುವ ದೃಷ್ಟಿಯಿಂದ ಕಾಲಕಾಲಕ್ಕೆ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸಂವಿಧಾನ ಪೀಠಿಕೆ ಅನಾವರಣ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಆವರಣದಲ್ಲಿ ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆಯನ್ನು ಸಚಿವ ಎಂ.ಬಿ.ಪಾಟೀಲ ಅನಾವರಣಗೊಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪಾಲಾರ್ಪಣೆ ಮಾಡಿದ ಸಚಿವರು, ನಂತರ ಸಂವಿಧಾನ ಪೀಠಿಕೆ ಅನಾವರಣಗೊಳಿಸಿ,ಸಂವಿಧಾನ ಪೀಠಿಕೆ ಬೋಧಿಸಿದರು.
ಶಾಸಕ ವಿಠ್ಠಲ ಕಟಕದೋಂಡ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಫ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಉಪ ಮೇಯರ್ ದಿನೇಶ ಹಳ್ಳಿ, ಚಂದ್ರಕಾಂತ ಶೆಟ್ಟಿ, ಅಡಿವೆಪ್ಪ ಸಾಲಗಲ್, ಅಭಿಷೇಕ ಚಕ್ರವರ್ತಿ, ರಮೇಶ ಆಸಂಗಿ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆ.ಕೆ.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸೌದಾಗರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುಂಡಲೀಕ ಮಾನವರ ಇದ್ದರು.
ರಮೇಶ ಜಿಗಜಿಣಗಿ ಅವರು ಸದ್ಯ ಆರ್‌ಒಬಿ ಸಂಸದರಾಗಿದ್ದಾರೆ. ಅವರಿಗೆ ಹೇಳಿಕೊಳ್ಳಲು ಬೇರೆ ವಿಷಯ ಇಲ್ಲ ಜಿಲ್ಲೆಯಲ್ಲಿ ಇದುವರೆಗೆ ರೈಲ್ವೆ ಮೇಲ್ಸೇತುವೆ ಮಾಡಿರುವುದೇ ಅವರ ದೊಡ್ಡ ಸಾಧನೆ-ಎಂ.ಬಿ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ನವೀಕೃತ ಗ್ರಂಥಾಲಯ ಉದ್ಘಾಟನೆ
ವಿಜಯಪುರ: ನಗರದ ಗಾಂಧಿವೃತ್ತ ಹಾಗೂ ನೆಹರೂ ಮಾರುಕಟ್ಟೆ ಹತ್ತಿರದಲ್ಲಿರುವ 140 ವರ್ಷಗಳ ಇತಿಹಾಸ ಹೊಂದಿದ ನವೀಕರಣಗೊಂಡ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. 1885ರಲ್ಲಿ ಸ್ಥಾಪಿತವಾದ ಈ ನಗರ ಕೇಂದ್ರ ಗ್ರಂಥಾಲಯ ಉತ್ತಮವಾದ ಪುಸ್ತಕ ಸಂಗ್ರಹವನ್ನು ಹೊಂದಿದೆ. ಹಳೆಯ ಇತಿಹಾಸವನ್ನು ಹೊಂದಿದ ಗ್ರಂಥಾಲಯವು ಇದೀಗ ₹19 ಲಕ್ಷ ವೆಚ್ಚದಲ್ಲಿ ಹೊಸ ರೂಪ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಭಾರ ಉಪನಿರ್ದೇಶಕ ಬಸವರಾಜ ತಳವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್.ಮಲಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.