ಇಂಡಿ: ‘ಆರೋಗ್ಯ ಇಲಾಖೆಗೆ ವಾಹನಗಳನ್ನು ಬಾಡಿಗೆಗೆ ನೀಡಿದ್ದ ಮಾಲೀಕರಿಗೆ ಐದು ತಿಂಗಳಿನಿಂದ ಬಾಡಿಗೆ ಸಂದಾಯವಾಗಿಲ್ಲ’ ಎಂಬ ಆರೋಪ ಕೇಳಿಬಂದಿದೆ.
‘ಆರೋಗ್ಯ ಇಲಾಖೆ ಸಿಬ್ಬಂದಿಯು ಗ್ರಾಮೀಣ ಭಾಗದ ಶಾಲಾ–ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾರೆ. ಇದಕ್ಕಾಗಿ ಖಾಸಗಿ ವಾಹನಗಳನ್ನು ಬಾಡಿಗೆ ಪಡೆಯುತ್ತಾರೆ. ಹೀಗೆ ವಾಹನಗಳನ್ನು ಬಾಡಿಗೆಗೆ ನೀಡಿದ್ದಕ್ಕೆ ಹಣವನ್ನೇ ನೀಡಿಲ್ಲ’ ಎಂದು ವಾಹನ ಮಾಲೀಕರು ಅಲವತ್ತುಕೊಂಡಿದ್ದಾರೆ.
‘ಏಜೆನ್ಸಿ ಮೂಲಕ ವಾಹನಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಆದರೆ, ಏಜೆನ್ಸಿಯ ಯಾರೊಬ್ಬರೂ ನಮ್ಮ ಕರೆ ಸ್ವೀಕರಿಸುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲಧಿಕಾರಿಗಳನ್ನು ಕೇಳಿದರೂ ಸ್ಪಂದಿಸುತ್ತಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸ್ಥಳೀಯ ಏಜೆನ್ಸಿ ಮೂಲಕ ಬಾಡಿಗೆ ನೀಡಿದರೆ, ಅವರನ್ನು ಸಂಪರ್ಕಿಸಬಹುದು. ಆದರೆ, ಬೇರೆ ಜಿಲ್ಲೆಗಳ ಏಜೆನ್ಸಿಗಳಿಗೆ ಟೆಂಡರ್ ನೀಡಿದ್ದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವಾಹನಗಳಿಗೆ ಇಂಧನವನ್ನೂ ನಾವೇ ಹಾಕಿಸಿದ್ದೇವೆ. ಬಿಲ್ ಸಂದಾಯ ಮಾಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದಿದ್ದರೆ ಧರಣಿ ನಡೆಸಬೇಕಾಗುತ್ತದೆ’ ಎಂದು ವಾಹನಗಳ ಮಾಲೀಕರಾದ ರೋಹಿತ್ ಅಂಕಲಗಿ, ರಾಹುಲ್ ಛಲವಾದಿ, ಪ್ರವೀಣ ಭಾವಿಕಟ್ಟಿ, ಚಂದ್ರು ಕಾಂಬಳೆ, ನಾಗೇಶ ಮಲ್ಲಾಡಿ, ರಾಜು ರಾಂಪೂರ, ಆಕಾಶ ಹಚಡದ, ಸಚಿನ್ ಕುಂಬಾರ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.