ADVERTISEMENT

ಒಳಮೀಸಲು, ಬಲಗೈ ಸಮುದಾಯಕ್ಕೆ ಮರಣಶಾಸನ; ರಾಜಶೇಖರ ಕೂಚಬಾಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:33 IST
Last Updated 15 ಆಗಸ್ಟ್ 2025, 5:33 IST
ರಾಜಶೇಖರ ಕೂಚಬಾಳ
ರಾಜಶೇಖರ ಕೂಚಬಾಳ   

ಸಿಂದಗಿ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯ ಏಕಸದಸ್ಯ ಆಯೋಗ ಸಲ್ಲಿಸಿದ ಒಳಮೀಸಲಾತಿ ವರದಿ ಸಮಸ್ತ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣಶಾಸನವಾಗಿದೆ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಪ್ರಮುಖ ರಾಜಶೇಖರ ಕೂಚಬಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಮುಂಬರುವ ಸಚಿವ ಸಂಪುಟದಲ್ಲಿ ಈ ವರದಿ ಅಂಗೀಕಾರವಾದರೆ ರಾಜ್ಯದಾದ್ಯಂತ ಪರಿಶಿಷ್ಟ ಜಾತಿ ಬಲಗೈ ಸಮುದಾಯದಿಂದ ಕ್ರಾಂತಿಯೇ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಲಗೈ ಸಮುದಾಯದ ಸಚಿವರು ಛಲವಾದಿ, ಹೊಲೆಯ ಸಮುದಾಯದ ಪರವಾಗಿ ನಿಲ್ಲಬೇಕು. ಆಗಿರುವ ಅನ್ಯಾಯ ಎತ್ತಿ ಹಿಡಿದು ವರದಿ ಪುರಸ್ಕಾರಗೊಳ್ಳದೇ ಪರಿಷ್ಕರಣೆಗಾಗಿ ಬದ್ಧತೆಯಿಂದ ಸಚಿವ ಸಂಪುಟದಲ್ಲಿ ವಿರೋಧಿಸಬೇಕು ಎಂದು ಕೇಳಿಕೊಂಡರು.

ADVERTISEMENT

ಬಲಗೈ ಸಮುದಾಯವನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ನ್ನಾಗಿ ಮಾಡಿಕೊಂಡು ಅಧಿಕಾರ ಹಿಡಿದುಕೊಳ್ಳಲಾಗುತ್ತದೆ. ಈ ಸಮುದಾಯದ ಬಗ್ಗೆ ಕೃತಜ್ಞತೆ ಇದ್ದರೆ ವರದಿ ತಿರಸ್ಕರಿಸಬೇಕು. ನಾವು ಒಳಮೀಸಲಾತಿ ವಿರೋಧಿಗಳಲ್ಲ. ಆದರೆ, ಆಗಿರುವ ದೊಡ್ಡ ಪ್ರಮಾದವನ್ನು ಸರಿಪಡಿಸಿ ವರದಿಯನ್ನು ಅಂಗೀಕಾರ ಮಾಡಬೇಕು. ರಾಜ್ಯದಲ್ಲಿ ಹೊಲೆಯ ತತ್ಸಮಾನ ಜಾತಿಗಳನ್ನು ಮೂರು ಭಾಗ ಮಾಡಿ ಮೀಸಲಾತಿ ಕಡಿಮೆಗೊಳಿಸಿರುವ ಉಲ್ಲೇಖ ವರದಿಯಲ್ಲಿದೆ. ಹೊಲೆಯ ಮತ್ತು ಛಲವಾದಿ ಸಮುದಾಯವನ್ನು ಪ್ರತ್ಯೇಕಗೊಳಿಸಿ ಛಲವಾದಿ ಸಮುದಾಯಕ್ಕೆ ಕೇವಲ ಪ್ರತಿಶತ 1 ರಷ್ಟು ಮೀಸಲಾತಿ ನೀಡುವ ಹುನ್ನಾರ ನಡೆದಿದೆ ಎಂದು ಕೂಚಬಾಳ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಒಳಮೀಸಲಾತಿ ಸಮೀಕ್ಷೆಗೆ ಮುಂದಾಗಿರುವದಕ್ಕೆ ಹೆಮ್ಮೆ ಪಡುತ್ತೇವೆ. ಆದರೆ ವರದಿ ದೋಷಪೂರಿತವಾಗಿದ್ದು, ಕೇವಲ ಒಂದು ಸಮುದಾಯದ ಓಲೈಕೆಯಾಗಿದೆ. ಕೂಲಂಕುಷವಾಗಿ ಪರಿಷ್ಕರಣೆ ಮಾಡಿದ ನಂತರ ಜಾರಿಗೆ ತರಬೇಕು. ಬಲಗೈ ಸಮುದಾಯ ಮಾತ್ರ ಅಪ್ಪಟ ಅಂಬೇಡ್ಕರ ವಾದಿಗಳು. ಆದರೆ ಮೀಸಲಾತಿ ಲಾಭಕ್ಕಾಗಿ ಮಾತ್ರ ಅಂಬೇಡ್ಕರರ ಹೆಸರಿನಲ್ಲಿ ಹೋರಾಟ ಮಾಡುವ ಸಮುದಾಯಕ್ಕೆ ವರದಿಯಲ್ಲಿ ಮೀಸಲಾತಿ ಹೆಚ್ಚಿನ ಲಾಭ ದೊರಕಿದೆ ಎಂದು ಟೀಕಿಸಿದರು.

ಛಲವಾದಿ ಮಹಾಸಭಾ ಪ್ರಮುಖರಾದ ಪರುಶರಾಮ ಕೂಚಬಾಳ, ರವಿ ಹೊಳಿ, ನಿಂಗರಾಜ ಗುಡಿಮನಿ, ರಾಕೇಶ ಕಾಂಬಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.