ADVERTISEMENT

ಜಿಗಜಿಣಗಿಯದ್ದು ನಾಯಕನ ನಡೆಯಲ್ಲ; ಜಲಜಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 16:31 IST
Last Updated 17 ಏಪ್ರಿಲ್ 2019, 16:31 IST
   

ವಿಜಯಪುರ:‘ಅಸ್ಪೃಶ್ಯತೆಯನ್ನು ಇಂದಿಗೂ ಪೋಷಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯದ್ದು ನಾಯಕನ ನಡೆಯಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಲಜಾ ನಾಯ್ಕ್‌ ಟೀಕಿಸಿದರು.

‘ಜಿಗಜಿಣಗಿ ಇಂದಿಗೂ ದೇಗುಲ ಪ್ರವೇಶಿಸಲ್ಲ. ಇದು ಏನನ್ನು ಸೂಚಿಸುತ್ತದೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕಾಂಗ್ರೆಸ್‌ ಮಾಡಿದ ಕೆಲಸಗಳನ್ನು ತಾನು ಮಾಡಿರುವೆ ಎಂದು ಹೇಳಿಕೊಂಡು ಓಡಾಡುತ್ತಿರುವ ಜಿಗಜಿಣಗಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯ ಕಟ್ಟಾ ಮತದಾರರೇ ಮೋದಿ ಅವರನ್ನು ನೋಡಿ ವೋಟು ಹಾಕುತ್ತೇವೆ. ದನ ನಿಂತರೂ ಹಾಕುತ್ತೇವೆ ಎನ್ನುತ್ತಾರೆ ಎಂದರೇ ಬಿಜೆಪಿಗರಲ್ಲಿಯೇ ಜಿಗಜಿಣಗಿ ಬಗ್ಗೆ ಎಷ್ಟು ಅಸಮಾಧಾನವಿದೆ ಎಂಬುದನ್ನು ನೀವೇ ಗಮನಿಸಿ’ ಎಂದರು.

‘ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಸಚಿವರಾಗಿ ಜಿಗಜಿಣಗಿ ಏನೂ ಮಾಡಿಲ್ಲ, ಕುಡಿಯುವ ನೀರಿನ ಒಂದೇ ಒಂದು ಸಣ್ಣ ಯೋಜನೆಯನ್ನು ಜಿಲ್ಲೆಗೆ ನೀಡಿಲ್ಲ. ಅನುದಾನವನ್ನು ಸಹ ಪರಿಪೂರ್ಣವಾಗಿ ಬಳಸಿಲ್ಲ. ಅನುದಾನ ಸದ್ಬಳಕೆ ಮಾಡಿಕೊಳ್ಳಲು ಶ್ರಮವನ್ನೇ ಹಾಕಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕಾಂಗ್ರೆಸ್ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಫ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾದೇವಿ ಗೋಕಾಕ, ವಸಂತ ಹೊನಮೊಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.