ADVERTISEMENT

ಪರ್ತಕರ್ತರ ರಾಜ್ಯ ಸಮ್ಮೇಳನ: ‘ಗುಮ್ಮಟ ನಗರ’ದಲ್ಲಿ ಪತ್ರಕರ್ತರ ಕಲರವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 13:51 IST
Last Updated 3 ಫೆಬ್ರುವರಿ 2023, 13:51 IST
ವಿಜಯಪುರ ನಗರದಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮೇಳನ ಸಿದ್ಧತಾ ಸಭೆಯಲ್ಲಿ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು 
ವಿಜಯಪುರ ನಗರದಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮೇಳನ ಸಿದ್ಧತಾ ಸಭೆಯಲ್ಲಿ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು    

ವಿಜಯಪುರ: ಐತಿಹಾಸಿಕ ‘ಗುಮ್ಮಟ ನಗರ’ ವಿಜಯಪುರ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸನ್ನದ್ಧವಾಗಿದೆ.

ಫೆ.4 ಮತ್ತು 5 ರಂದು ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನಕ್ಕೆ ರಾಜ್ಯದ ಮೂಲಮೂಲೆಗಳಿಂದ ಸಾವಿರಾರು ಪತ್ರಕರ್ತರು ಆಗಮಿಸಿದ್ದಾರೆ.

ಎರಡು ದಿನ ನಡೆಯುವ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆ.4ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

ADVERTISEMENT

ಐತಿಹಾಸಿಕವಾಗಿಸಲು ಪಣ: ಸಮ್ಮೇಳನ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ, ‘ನಮ್ಮ ಮಂದಿ ಚುರುಕಾಗಿದ್ದಾರೆ. ಅವರೆಲ್ಲ ಸೇರಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ತುಂಬ ಚಂದ ಮಾಡಲಿದ್ದಾರೆ’ ಎಂದು ಸಿದ್ದೇಶ್ವರ ಶ್ರೀಗಳು ತಮ್ಮ ಕೊನೆಯ ಆಶಯವಾಗಿ ಸಮ್ಮೇಳನಕ್ಕೆ ಹರಸಿದ್ದರು. ಅವರ ನುಡಿಯಂತೆ ಸಮ್ಮೇಳನವನ್ನು ಐತಿಹಾಸಿಕವಾಗಿಸಲು ಸಿದ್ಧತೆ ಪೂರ್ಣಗೊಂಡಿದೆ ಎಂದು ಹೇಳಿದರು.

ರಾಜ್ಯದ ಗಡಿ ಭಾಗದ ಇತಿಹಾಸ ಪ್ರಸಿದ್ಧ ನಗರದಲ್ಲಿ ನಡೆಯುತ್ತಿರುವ ಪತ್ರಕರ್ತರ ಸಮ್ಮೇಳನದಲ್ಲಿ ಸಾವಿರಾರು ಪತ್ರಕರ್ತರು ಮೇಳೈಸಲಿದ್ದಾರೆ. ಎಲ್ಲರಿಗೂ ಅಗತ್ಯ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದವರಿಗೆಲ್ಲ ‘ಬಿಜಾಪುರದ ಜವಾರಿ ಊಟ’ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಮ್ಮೇಳನವನ್ನು ಎಲ್ಲರೂ ಮನೆಯ ಕಾರ್ಯಕ್ರಮದಂತೆ ಭಾವಿಸಿ ರೂಪಿಸಬೇಕು. ಇದರಿಂದ ಜಿಲ್ಲೆಗೆ ವಿಶೇಷ ಹೆಸರು ಬರಲಿದೆ. ಜಿಲ್ಲೆಯ ಪತ್ರಕರ್ತರಿಗೆ ನೋಂದಣಿ ಅಗ್ಯವಿಲ್ಲ. ಹೊರಗಿನಿಂದ ಬರುವ ಪ್ರತಿನಿಧಿಗಳಿಗೆ ನೋಂದಣಿ ಮಾಡಿಕೊಳ್ಳಲಾಗುವುದು. ಸಮ್ಮೇಳನ ಮುಗಿಯುವವರೆಗೆ ಯಾರೂ ಮೈಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಕೊಡಗಿನ ಅಜ್ಜಮಾಡು ರಮೇಶ ಕಟ್ಟಪ್ಪ ಮಾತನಾಡಿ, ವಿಜಯಪುರದ ಜನ ಹೃದಯ ವೈಶಾಲ್ಯವಿರುವವರು ಎನ್ನುವುದಕ್ಕೆ ಎಷ್ಟೇ ಜನ ಬಂದರೂ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡುತ್ತೇವೆ. ಯಾವ ಕೊರತೆಯೂ ಆಗಲ್ಲ ಎಂದಿರುವುದೇ ಸಾಕ್ಷಿ. ಈಗಾಗಲೇ ಬರುವ ಅನೇಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಇನ್ನೂ ನೂರಾರು ಜನರಿಗೆ ವಸತಿ ವ್ಯವಸ್ಥೆ ಮಾಡಿರುವುದು ಖುಷಿ ತಂದಿದೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಮಾತನಾಡಿ, ಇದೊಂದು ಮನೆಯ ಕಾರ್ಯಕ್ರಮದ ತರಹ ನಾವೆಲ್ಲ ಶ್ರಮಿಸಬೇಕು ಎಂದರು.

ವಸತಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು, ರಾಜ್ಯ ಸದಸ್ಯ ಡಿ.ಬಿ.ವಡವಡಗಿ ಮತ್ತು ಸಾರಿಗೆ ಸಮಿತಿಯ ಮುಖ್ಯಸ್ಥ ಇರ್ಫಾನ್ ಶೇಖ್, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ರಾಜ್ಯ ಕಾರ್ಯದರ್ಶಿ ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಕೌಶಲ ಪಳಾನಕರ, ಶಿವಕುಮಾರ್ ಉಪ್ಪಿನ, ಲಕ್ಷ್ಮಿ ವಾಲೀಖಾರ್, ಗಿರಿಜಾ ಕನಮಡಿ, ಎಸ್.ಬಿ.ಪಾಟೀಲ, ಅಶೋಕ ಯಡ್ಡಳ್ಳಿ, ನವೀದ್ ಮಮದಾಪುರ, ಷಡಕ್ಷರಿ ಕಂಪು, ಮೋಹನ್ ಕುಲಕರ್ಣಿ, ಗುರುರಾಜ ಲೋಕುರೆ, ವಿಠ್ಠಲ ಲಂಗೋಟಿ, ಬಾಲು ಸಾರವಾಡ, ಸದ್ದಾಂ ಜಮಾದಾರ್, ಫಿರೋಜ್ ರೋಜಿಮದಾರ್, ಅಲ್ಲಾಬಕ್ಷ ಗೋರೆ, ಅಜಯ್ ಕುಲಕರ್ಣಿ, ಸಂಜಯ್, ರಾಹುಲ್ ಆಪ್ಟೆ, ಮಾಧವರಾವ್‌ ಕುಲಕರ್ಣಿ, ಪವನ್ ಇದ್ದರು.

****

ಸಮ್ಮೇಳನದಲ್ಲಿ ಇಂದು, ನಾಳೆ

ಫೆ.4ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಸ್ಮರಣ ಸಂಚಿಕೆ ಬಿಡುಗಡೆ–ಸಚಿವ ಗೋವಿಂದ ಕಾರಜೋಳ, ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ–ಸಚಿವ ಮುರುಗೇಶ ನಿರಾಣಿ, ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ– ಸಚಿವ ಸಿ.ಸಿ.ಪಾಟೀಲ್, ವಸ್ತು ಪ್ರದರ್ಶನ ಉದ್ಘಾಟನೆ– ಶಾಸಕ ಬಸನಗೌಡ ಪಾಟೀಲ ಯತ್ನಾಳ

ಅಧ್ಯಕ್ಷತೆ– ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ, ಸಾನ್ನಿಧ್ಯ–ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ.

ಪ್ರಾಸ್ತಾವಿಕ ನುಡಿ– ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್‌, ಮೊದಲ ಮಾತು– ವಿಜಯವಾಣಿ ಸಂಪಾದಕ ಕೆ.ಎನ್‌.ಚನ್ನೇಗೌಡ.

ವಿಚಾರಗೋಷ್ಠಿ:

ಫೆ.4 ರಂದು ಮಧ್ಯಾಹ್ನ 2ಕ್ಕೆ ‘ನವ ಮಾಧ್ಯಮಗಳು ಮತ್ತು ಪತ್ರಕರ್ತರು’ ವಿಚಾರಗೋಷ್ಠಿ ಹಾಗೂ ಸಂಜೆ 4ಕ್ಕೆ ‘ಗಡಿ ಭಾಗದಲ್ಲಿ ಮಾಧ್ಯಮ’ ಗೋಷ್ಠಿ, ಸಂಜೆ 5.35ಕ್ಕೆ ಪ್ರತಿನಿಧಿಗಳ ಸಮಾವೇಶ

ಫೆ.5 ರಂದು ಬೆಳಿಗ್ಗೆ 10ಕ್ಕೆ ‘ಸುದ್ದಿ ಮನೆ ಮತ್ತು ಪತ್ರಿಕಾ ವಿತರಕರು’ ಕುರಿತ ಗೋಷ್ಠಿ, ಬೆಳಿಗ್ಗೆ 11ಕ್ಕೆ ‘ಸುದ್ದಿ ಮನೆ ಮತ್ತು ಮಹಿಳೆಯರು’ ಗೋಷ್ಠಿ

ಫೆ.5 ರಂದು ಮಧ್ಯಾಹ್ನ 1.45ಕ್ಕೆ ಸಮಾರೋಪ ಸಮಾರಂಭ, ಸಾನ್ನಿಧ್ಯ– ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಸಮಾರೋಪ ಭಾಷಣ–ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಶಸ್ತಿ ಪ್ರದಾನ–ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.