ADVERTISEMENT

ಅನುರಣಿಸಿದ ಕನ್ನಡ ಡಿಂಡಮ...

ಹಚ್ಚೇವು ಕನ್ನಡದ ದೀಪ ಹಾಡಿದ ಸಚಿವೆ ಜೊಲ್ಲೆ, ಪೊಲೀಸ್‌ ಬ್ಯಾಂಡ್‌ನಲ್ಲೂ ಹೊಮ್ಮಿದ ಕನ್ನಡ ಗೀತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 12:40 IST
Last Updated 1 ನವೆಂಬರ್ 2021, 12:40 IST
ವಿಜಯಪುರ ಜಿಲ್ಲಾಡಳಿತದಿಂದ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಡಳಿತದಿಂದ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲಾಡಳಿತದಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕನ್ನಡಮಯವಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಹಚ್ಚೇವು ಕನ್ನಡದ ದೀಪ‘ ಗೀತೆಯನ್ನು ಸುಮಧುರವಾಗಿ ಹಾಡಿದರು. ಪೊಲೀಸ್‌ ಬ್ಯಾಂಡ್‌ನಲ್ಲೂ ಕನ್ನಡ ಗೀತೆಗಳು ಅನುರಣಿಸಿದವು.

ಸಚಿವೆ ಜೊಲ್ಲೆ ಅವರು ಪರೇಡ್ ವೀಕ್ಷಣೆ ವೇಳೆ ಪೊಲೀಸ್ ಬ್ಯಾಂಡ್ ಸಿಬ್ಬಂದಿ 'ನಮ್ಮೂರ ಮಂದಾರ ಹೂವೆ‘ ಹಾಡಿಗೆ ವಾದ್ಯ ನುಡಿಸಿದರು‌. ಬಳಿಕ ನಿರ್ಗಮನದ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಧ್ವನಿಯಾದರು.‌ ’ಟುವ್ಹಿ..ಟುವ್ಹಿ..ಎಂದು ಹಾಡವ‘ ಹಾಡನ್ನು ವಾದ್ಯದ ಮೂಲಕ ಮನಸೂರೆಗೊಂಡರು. ಅಲ್ಲದೇ, ಪಥಸಂಚನ ನಿರ್ವಹಣೆ ವೇಳೆಸಂಪೂರ್ಣ ಕನ್ನಡದಲ್ಲಿ ಸೂಚನೆ, ನಿರ್ದೇಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾದರು.

ADVERTISEMENT

ಕನ್ನಡ ನಾಡು, ನುಡಿಗೆ ಶ್ರಮಿಸಿದ ಮಹನೀಯರು, ಕರ್ನಾಟಕ ಏಕೀಕರಣದ ರೂವಾರಿಗಳನ್ನು ತಮ್ಮ ಭಾಷಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸ್ಮರಿಸಿದರು.

ಸುಂದರವಾದ ಲಿಪಿ, ದೊಡ್ಡ ವರ್ಣಮಾಲೆ, ಸಾಪೇಕ್ಷ ವ್ಯಾಕರಣ, ವಿಶಿಷ್ಟ ಸಂಖ್ಯೆ ಹಾಗೂ ಸುಮಧುರ ಉಚ್ಛಾರಣೆಯ ಸೊಬಗನ್ನು ಹೊಂದಿರುವ ಅತೀ ಸುಂದರವಾದ ಭಾಷೆ ನಮ್ಮ ಸವಿಗನ್ನಡ ಎಂದು ಶ್ಲಾಘಿಸಿದರು.

ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಈ ಬಾರಿ 'ಬಾರಿಸು ಕನ್ನಡ ಡಿಂಡಿಮವ...', 'ಜೋಗದ ಸಿರಿ ಬೆಳಕಿನಲ್ಲಿ..', 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...' ಎಂಬ ನಾಡು, ನುಡಿಯ ಅಭಿಮಾನವನ್ನು ಸಾರುವ ಕನ್ನಡ ಗೀತೆಗಳನ್ನು ಗಾಯನ ಮಾಡಲು ಆದ್ಯತೆ ನೀಡುವ ಮೂಲಕ ನಾಡಿನೆಲ್ಲೆಡೆ ಕನ್ನಡ ಅನುರಣಿಸುವಂತೆ ಮಾಡಿರುವುದು ವಿಶೇಷ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:

ಶಿಕ್ಷಣ, ಸಾಹಿತ್ಯ, ನೃತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜಸೇವೆ, ಜಾನಪದ, ಆರೋಗ್ಯ, ಶಿಲ್ಪಕಲೆ, ಚಿತ್ರಕಲೆ, ರಂಗಭೂಮಿ, ಬಯಲಾಟ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಸಾಧಕರಿಗೆ ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಬಿಗಿ ಭದ್ರತೆ:

ಕಳೆದ ಆಗಸ್ಟ್‌ 15 ರಂದು ಧ್ವಜಾರೋಹಣ ಕಾರ್ಯಕ್ರಮದ ವೇಳೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ವಿವಿಧ ಸಂಘಟನೆಗಳ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಮುತ್ತಿಗೆ ಹಾಕಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿಯೊಬ್ಬರನ್ನೂ ತೀವ್ರ ತಪಾಸಣೆಗೆ ಒಳಪಡಿಸಲಾಯಿತು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಈರಪ್ಪ ಆಶಾಪೂರ ಇದ್ದರು.

****

ಸುಂದರ ಕನ್ನಡ ನಾಡಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ. ಅದನ್ನು ನಾವೆಲ್ಲರೂ ನಿಷ್ಠೆಯಿಂದ ಪರಿಪಾಲಿಸೋಣ

–ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.