ADVERTISEMENT

ವಿಜಯಪುರ: ಸರ್ಕಾರಿ ಶಾಲಾ ಶಿಕ್ಷಕ ದಂಪತಿ ಪುತ್ರ ರಾಜ್ಯಕ್ಕೆ ಪ್ರಥಮ

ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:52 IST
Last Updated 2 ಮೇ 2025, 15:52 IST
ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖೀಲ್‌ಅಹ್ಮದ್‌ ನದಾಫ್‌  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ತಂದೆ, ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು 
ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖೀಲ್‌ಅಹ್ಮದ್‌ ನದಾಫ್‌  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ತಂದೆ, ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು    

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖೀಲ್‌ಅಹ್ಮದ್‌ ನದಾಫ್‌  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಮಾದಿನಾಳ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕ ನಾಸಿರ್‌ ಅಲಿ ಬಿ.ಪಿಂಜಾರ, ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ನಂ.2ರ ವಿಜ್ಞಾನ ಶಿಕ್ಷಕಿ ಶೈನಾಜ್‌ಬೇಗಂ ಓಲೇಕಾರ ದಂಪತಿ ಪುತ್ರ ಅಖೀಲ್‌, ‘ತಂದೆ, ತಾಯಿ ಶಿಕ್ಷಕರಾಗಿರುವುದೇ ನನಗೆ ಈ ಸಾಧನೆ ಮಾಡಲು ಪ್ರೇರಣೆ. ನಾನು ನಿತ್ಯ 8-9 ಗಂಟೆ ಓದುತ್ತಿದ್ದೆ. ಶಿಕ್ಷಕರು ಹಗಲು, ರಾತ್ರಿ ಎನ್ನದೇ ನಮ್ಮ ಸಾಧನೆಗೆ ಮಾರ್ಗದರ್ಶನ ನೀಡಿದ್ದಾರೆ’ ಎಂದರು.

‘ಪಿಯುಸಿಯಲ್ಲಿ ವಿಜ್ಞಾನ ಓದಿ ಮುಂದೆ ಐ.ಐ.ಟಿ ಓದುವ ಆಸೆ ಇದೆ' ಎಂದು ತಿಳಿಸಿದರು.

ADVERTISEMENT

6 ರಿಂದ 8ನೇ ತರಗತಿ ವರೆಗೆ ಆಲಮಟ್ಟಿಯ ನವೋದಯ ಶಾಲೆ, 9 ಮತ್ತು 10ನೇ ತರಗತಿಯನ್ನು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ಓದಿದ್ದಾರೆ. 

‘ಮಗನ ಈ ಸಾಧನೆ ಮುಂದೆ ಬೇರೆ ಯಾವ ಖುಷಿಯೂ ನಮಗೆ ದೊಡ್ಡದಾಗಿ ಕಾಣಿಸುತ್ತಿಲ್ಲ. ಆತ ಶೇ 100ರಷ್ಟು ಫಲಿತಾಂಶ ಪಡೆದುಕೊಳ್ಳುವುದಾಗಿ ಮನೆಯಲ್ಲಿ ಹೇಳುತ್ತಿದ್ದ. ಆತ ಹೇಳಿದಂತೆ ಮಾಡಿ ತೋರಿಸಿದ್ದಾನೆ. ಮಗನ ಸಾಧನೆ ಅತೀವ ಖುಷಿಯನ್ನುಂಟು ಮಾಡಿದೆ’ ಎಂದು ವಿದ್ಯಾರ್ಥಿ ತಂದೆ ಎನ್.ಬಿ.ಪಿಂಜಾರ ಹೇಳಿದರು.

‘ವಿದ್ಯಾರ್ಥಿ ಅಖೀಲ್‌ಅಹ್ಮದ್‌ ನದಾಫ್‌ ಜಾಣನಾಗಿದ್ದ. ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಪರೀಕ್ಷೆಯಲ್ಲಿ ಈತನೆ ಮೊದಲಿಗನಾಗಿರುತ್ತಿದ್ದ. ನಮ್ಮ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಆತನಿಗೆ ಅಭಿನಂದಿಸುವೆವು’ ಎಂದು ನಾಗರಬೆಟ್ಟ ಆಕ್ಸಫರ್ಡ ಶಿಕ್ಷಣ ಸಂಸ್ಥೆ ಚೇರ್ಮನ್‌ ಎ.ಎಸ್.ಪಾಟೀಲ್ ಹೇಳಿದರು.

‘ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇವು. ನಮ್ಮ ಶಾಲೆಯ ವಿದ್ಯಾರ್ಥಿ ಅಖಿಲ್‌ ಅಹ್ಮದ್‌ ನದಾಫ್‌ ಅದನ್ನು ನಿಜವಾಗಿಸಿದ್ದಾನೆ. ಫಲಿತಾಂಶ ಖುಷಿ ಕೊಟ್ಟಿದೆ’ ಎಂದು ಮುಖ್ಯಶಿಕ್ಷಕ ಇಸ್ಮಾಯಿಲ್ ಮನಿಯಾರ್ ತಿಳಿಸಿದರು.

ಅಖೀಲ್‌ಅಹ್ಮದ್‌ ನದಾಫ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.