ADVERTISEMENT

ತುಳಸಿಮಾಲಾ, ಪುಷ್ಪಾ, ಗೋಮತಿ ಹೆಸರು ಅಂತಿಮ?

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಹುದ್ದೆ

ಬಸವರಾಜ ಸಂಪಳ್ಳಿ
Published 6 ಅಕ್ಟೋಬರ್ 2020, 11:55 IST
Last Updated 6 ಅಕ್ಟೋಬರ್ 2020, 11:55 IST
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ- ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ- ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತೆರವಾಗಿರುವ ಕುಲಪತಿ ಹುದ್ದೆಗೆ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.

ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ತುಳಸಿ ಮಾಲಾ, ಗುಲಬುರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಪುಷ್ಪಾ ಸವದತ್ತಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಗೋಮತಿ ದೇವಿ ಅವರ ಹೆಸರು ಅಂತಿಮವಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ಅವರು ಶೀಘ್ರದಲ್ಲೇ ರಾಜ್ಯಪಾಲರಿಗೆ ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಈ ವಾರದಲ್ಲಿ ಬಹುತೇಕ ಕುಲಪತಿ ನೇಮಕ ಘೋಷಣೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ADVERTISEMENT

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದೇಗೌಡ ನೇತೃತ್ವದ ಕುಲಪತಿ ಶೋಧನಾ ಸಮಿತಿಯು ಈಗಾಗಲೇ ಸೆ.4 ಮತ್ತು 17ರಂದು ಎರಡು ಸುತ್ತಿನ ಸಭೆ ನಡೆಸಿ, ಕುಲಪತಿ ಹುದ್ದೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಅಂತಿಮವಾಗಿ ಮೂವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಗಸ್ಟ್‌ 14ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಬಾರಿ ಪುರುಷ ಅಭ್ಯರ್ಥಿಗಳೂ ಸೇರಿದಂತೆಒಟ್ಟು 45 ಅರ್ಜಿಗಳು ಸಲ್ಲಿಕೆಯಾಗಿದ್ದವು,ಕುಲಪತಿ ಹುದ್ದೆ ಗಿಟ್ಟಿಸಿಕೊಳ್ಳಲು ದೊಡ್ಡಮಟ್ಟದ ಲಾಬಿ ನಡೆದಿದೆ.

ನೀತಿ ಸಂಹಿತೆ ಅಡ್ಡಿ ಸಾಧ್ಯತೆ:

ರಾಜ್ಯದಲ್ಲಿ ಜಾರಿಯಲ್ಲಿರುವ ಉಪ ಚುನಾವಣಾ ನೀತಿ ಸಂಹಿತೆಯು ಕುಲಪತಿ ಹುದ್ದೆ ನೇಮಕಕ್ಕೆ ಅಡ್ಡಿಯಾಗುವುದರಿಂದ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಆದರೆ, ಕುಲಪತಿ ನೇಮಕ ವಿಷಯವು ರಾಜ್ಯಪಾಲರಿಗೆ ಸೇರಿರುವುದರಿಂದ ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಕಡೆ ಅವಧಿ ಡಿಸೆಂಬರ್‌ ವರೆಗೆ:

ಪ್ರೊ.ಸಬಿಹಾ ಭೂಮಿಗೌಡ ಅವರು ಕುಲಪತಿ ಹುದ್ದೆಯಿಂದ ನಿವೃತ್ತರಾದ ಬಳಿಕ ಪ್ರೊ.ಓಂಕಾರ ಕಾಕಡೆ ಅವರು ಪ್ರಭಾರ ಕುಲಪತಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, ಇವರ ಅಧಿಕಾರವಧಿ ಡಿಸೆಂಬರ್‌ 13ರ ವರೆಗೆ ಇದೆ. ಅಷ್ಟರಲ್ಲಿ ಹೊಸ ಕುಲಪತಿ ನೇಮಕವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.