ಇಂಡಿ: ಬರಗಾಲದ ಹಣೆ ಪಟ್ಟಿ ಹೊತ್ತಿದ್ದ ಇಂಡಿಗೆ ಕೃಷ್ಣಾ ನದಿಯ ನೀರಿನಿಂದ ಕೆರೆಗಳನ್ನು ತುಂಬಿಸಿದ ಪರಿಣಾಮ ತೋಟಗಾರಿಕಾ ಬೆಳೆಗಳ ಮತ್ತು ಇನ್ನಿತರ ಬೆಳೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಶಾಸಕ ಯಶವಂತರಾಯಗೌಡ ಪಾಟೀಲ ಶ್ರಮದಿಂದ ತಿಡಗುಂದಿ ಶಾಖಾ ಕಾಲುವೆಯ ಮೂಲಕ ಇಂಡಿ ತಾಲ್ಲೂಕಿನ ದೇಗಿನಾಳ ಕೆರೆ ನಂಬರ್ 1 ಮತ್ತು 2, ನಿಂಬಾಳ, ಬಬಲಾದ, ಹಳಗುಣಕಿ, ಕೂಡಗಿ, ಗುಂದವಾನ, ಹೊರ್ತಿ, ಕೊಳೂರಗಿ, ಸಾವಳಸಂಗ, ಸೊನಕನಹಳ್ಳಿ, ನಂದರಗಿ, ಹಂಜಗಿ, ಹಡಲಸಂಗ 1 ಮತ್ತು 2, ತಡವಲಗಾ, ಅಥರ್ಗಾ, ಕೊಟ್ನಾಳ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆಗೆ ಕೆರೆ ತುಂಬಿಸುವ ಯೋಜನೆಯಿಂದ ಮುಕ್ತಿ ಸಿಕ್ಕಿದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಈ ಎಲ್ಲಾ ಕೆರೆಗಳಿಂದ ನೀರು ಸರಬರಾಜಾಗುತ್ತಿದೆ.
ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಿಲ್ಲದೇ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ದೂರದ ಭೀಮಾ ನದಿಯಿಂದ, ಇಲ್ಲವೇ ನೀರು ಇದ್ದ ರೈತರಿಗೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಟ್ಯಾಂಕರ್ ಮೂಲಕ ನೀರು ಹಾಯಿಸಲು ಆಗದ ರೈತರು ಹತ್ತಾರು ವರ್ಷಗಳಿಂದ ಬೆಳೆಸಿದ್ದ ನಿಂಬೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಇದೀಗ ತಾಲ್ಲೂಕಿನ ಪ್ರಮುಖ ಗ್ರಾಮಗಳಲ್ಲಿ ಕೆರೆಗಳು ತುಂಬಿಸಿದ್ದರಿಂದ ಅಂತರ್ಜಲ ಹೆಚ್ಚಾಗಿ ಕೆಲವು ರೈತರ ಕೊಳವೇ ಬಾವಿಗಳು ತುಂಬಿವೆ. ಕೆಲವು ರೈತರು ಕೆರೆಗಳಿಂದ ನೀರು ಉಪಯೋಗಿಸಿ ಬೆಳೆಗಳನ್ನು ಉಳಿಸಿಕೊಂಡಿದ್ದಾರೆ.
ತಾಲ್ಲೂಕಿನ ಕೆರೆಗಳು ಕಂಗೊಳಿಸುತ್ತಿವೆ. ಈ ಎಲ್ಲಾ ಕೆರೆಗಳ ಕೆಳಭಾಗದಲ್ಲಿರುವ ರೈತರು ಕಬ್ಬು, ಹತ್ತಿ, ತೊಗರಿ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಮಳೆಯ ಕೊರತೆಯಾದರೆ ಕೆರೆಗಳಿಂದ ನೀರು ಹಾಯಿಸುತ್ತಾರೆ.
ಮುಂಗಾರು ಮಳೆ ಬೀಳುವ ಮುನ್ನವೇ ಕೆರೆಗಳಿಗೆ ನೀರು ಬಂದಿರುವುದನ್ನು ಕಂಡ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ನೀರಿನಿಂದ ಜನ, ಜಾನುವಾರು, ಪಕ್ಷಿ ಸಂಕುಲಗಳಿಗೆ ಅನುಕೂಲವಾಗಿದೆ. ಈ ಕೆರೆಗಳನ್ನು ತುಂಬಿಸಿರುವದರಿಂದ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಅಲ್ಲದೇ ಸುಮಾರು 8,000 ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ.
‘ತಾಲ್ಲೂಕಿನಲ್ಲಿ ಕೆರೆಗಳನ್ನು ತುಂಬಿಸಿರುವದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಶಾಖಾ ಕಾಲುವೆ ಇಲ್ಲದ ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಹಿಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪ್ಯಾಟಿ ಹೇಳಿದರು.
‘ಗುಂದವಾನ ಕೆರೆ ತುಂಬಿರುವದರಿಂದ ಈ ಭಾಗದ ಎಲ್ಲಾ ರೈತರಿಗೆ ಅನುಕೂಲವಾಗಿದೆ. ರೈತರು ಸಂತಸದಲ್ಲಿದ್ದಾರೆ’ ಎಂದು ಪ್ರಗತಿಪರ ರೈತ ಗುರುನಾಥ ಬಗಲಿ ಗುಂದವಾನ ತಿಳಿಸಿದರು.
ಇಂಡಿ ತಾಲ್ಲೂಕಿನಲ್ಲಿಯ ಕೆರೆಗಳನ್ನು ತುಂಬಿಸುವುದಾಗಿ ಗ್ರಾಮಸ್ಥರಿಗೆ ಮತ್ತು ರೈತರಿಗೆ ಕೊಟ್ಟ ಮಾತು ಈಡೇರಿಸಿದ್ದೇನೆ. ಕುಡಿಯುವ ನೀರು ತೋಟಗಾರಿಕಾ ಬೆಳೆಗಳ ರೈತರಿಗೆ ಜಾನುವಾರು ಪಕ್ಷಿ ಸಂಕುಲಕ್ಕೆ ಹೆಚ್ಚಿನ ಅನುಕೂಲವಾಗಿದೆ-ಯಶವಂತರಾಯಗೌಡ ಪಾಟೀಲ, ಶಾಸಕ
ಸ್ವಲ್ಪ ಭಾಗ ಒಣಗಿ ನಿಂತಿದ್ದ ನಿಂಬೆ ಗಿಡಗಳು ಕೆರೆಗಳಿಗೆ ನೀರು ತುಂಬಿದ್ದರಿಂದ ಚಿಗುರೊಡೆಯುತ್ತಿವೆ. ಪ್ರಸಕ್ತ ವರ್ಷದಲ್ಲಿ 1000 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹೆಚ್ಚಾಗುವ ನೀರಿಕ್ಷೆಯಿದೆ- ಎಚ್.ಎಸ್.ಪಾಟೀಲ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ
ಕೆರೆ ತುಂಬಿದ್ದರಿಂದ ತೆರೆದ ಬಾವಿಗಳು ಕೊಳವೆ ಬಾವಿಗಳಿಗೆ ನೀರು ಬಂದಿದೆ. 8 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಬ್ಬು 10 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವರ್ಷದಲ್ಲಿ ಮಳೆಯಾಧಾರಿತ ಒಂದೇ ಬೆಳೆ ಬೆಳೆಯುವ ರೈತರು ಈ ಸಲ ಎರಡು ಬೆಳೆ ತೆಗೆಯುತ್ತಾರೆ- ಮಹಾದೇವಪ್ಪ ಏವೂರ, ಸಹಾಯಕ ನಿರ್ದೇಶಕಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.