ADVERTISEMENT

ಪ್ರಜಾಪ್ರಭುತ್ವಕ್ಕೆ ಕಟಿಬದ್ಧವಾದ ಪತ್ರಿಕೆ ‘ಪ್ರಜಾವಾಣಿ’: ಡಾ.ಕುಂ.ವೀರಭದ್ರಪ್ಪ

ವಿಭೂತಿಹಳ್ಳಿಯಲ್ಲಿ ಬೆರಗು ಪ್ರಕಾಶನದ ಸಹಯೋಗದೊಂದಿಗೆ 'ಪ್ರಜಾವಾಣಿ ಅಮೃತ ಸಾಹಿತ್ಯೋತ್ಸವ'

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 10:06 IST
Last Updated 16 ಫೆಬ್ರುವರಿ 2023, 10:06 IST
   

ವಿಜಯಪುರ: ಪ್ರಜಾಪ್ರಭುತ್ವಕ್ಕೆ ಕಟಿಬದ್ಧವಾದ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಪತ್ರಿಕೆ ಪ್ರಜಾವಾಣಿಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ‍ಪ್ರಶಸ್ತಿ ಪುರಸ್ಕೃತ ಡಾ.ಕುಂ.ವೀರಭದ್ರಪ್ಪ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಕಡಣಿಯ ಬೆರಗು ಪ್ರಕಾಶನ ಸಂಸ್ಥೆ ಸಹಯೋಗದೊಂದಿಗೆ ಆಲಮೇಲ ತಾಲ್ಲೂಕಿನ ವಿಭೂತಿಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಜಾವಾಣಿ ಅಮೃತ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಎಲ್ಲ ಪತ್ರಿಕೆಗಳು ದೆಹಲಿ ಆಡಳಿತಕ್ಕೆ ಮಾರಾಟವಾಗಿವೆ. ಪ್ರತಿಯೊಂದು ಪತ್ರಿಕೆಯೂ ಒಂದೊಂದು ಪಕ್ಷದ ಮುಖವಾಣಿಯಾಗಿವೆ. ಭಜನಾ ತಂಡವಾಗಿವೆ. ಆದರೆ, ಪ್ರಜಾವಾಣಿ ಮಾತ್ರ ಸ್ವತಂತ್ರವಾಗಿ ಉಳಿದುಕೊಂಡಿದೆ. ಈ ಪತ್ರಿಕೆಗೆ ಯಾವುದೇ ಸಿದ್ಧಾಂತ(ಇಜಂ) ಇಲ್ಲ. ಕೇವಲ ಪ್ರಜಾಪ್ರಭುತ್ವ ರಕ್ಷಣೆಯನ್ನು ಮುಖ್ಯ ಉದ್ದೇಶವಾಗಿ ಹೊಂದಿರುವ ಪತ್ರಿಕೆಯಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಎಂದಾಕ್ಷಣ ಹೆಚ್ಚು ಸಂಭ್ರಮಿಸುವವರು ನಾಡಿನ ಲೇಖಕರು. ನಾಡಿನ ಪ್ರಜ್ಞಾವಂತ ಮತ್ತು ಕನ್ನಡದ ಮುಖ್ಯ ಬರಹಗಾರರನ್ನು ರೂಪಿಸಿದ ಪತ್ರಿಕೆಯಾಗಿದೆ. ಸಮಾಜಕ್ಕೆ ಕೈ ದೀವಿಗೆಯಾಗಿದೆ. ಲೇಖಕರಿಗೆ ಆಶ್ರಯ, ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.

ಪ್ರಜಾವಾಣಿ ಓದುಗರಲ್ಲಿ ವೈಚಾರಿಕತೆಯನ್ನು ಉದ್ದೀಪನ ಮಾಡಿದೆ. ಸಾಮಾಜಿಕ ಪ್ರಜ್ಞೆ, ರಾಜಕೀಯ ಪ್ರಜ್ಞೆ ಮೂಡಿಸುತ್ತದೆ. ಈ ಪತ್ರಿಕೆ ಓದುವ ಮೂಲಕ ನಮ್ಮೆಲ್ಲರ ವ್ಯಕ್ತಿತ್ವ ರೂಪುಗೊಂಡಿದೆ ಎಂದರು.

ಕುಟುಂಬ ಓದುವ ಪತ್ರಿಕೆ: ಬೆರಗು ಪ್ರಕಾಶನ ಸಂಸ್ಥೆ ಹೊರತಂದ 12 ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕಲಬುರ್ಗಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಮಾತನಾಡಿ, ಇಡೀ ಕುಟುಂಬ ಒಟ್ಟಿಗೆ ಕೂತು ನೋಡುವ ಯಾವುದಾದರೂ ಸಿನಿಮಾ ಇದೆ ಅಂದರೆ ಅದು ಡಾ.ರಾಜ್‌ಕುಮಾರ್‌ ಚಿತ್ರವಾಗಿದೆ. ಅದೇ ರೀತಿ ಇಡೀ ಕುಟುಂಬ ಓದುವ ಪತ್ರಿಕೆ ‘ಪ್ರಜಾವಾಣಿ’ಯಾಗಿದೆ ಎಂದು ಶ್ಲಾಘಿಸಿದರು.

ಬರಹಗಾರರನ್ನು ಹುಟ್ಟು ಹಾಕುವ ಸಮಾಜಮುಖಿ ಪತ್ರಿಕೆಯಾಗಿದೆ. ಅಸ್ಪೃಶ್ಯತೆ, ಶೋಷಣೆ,ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನದ ವಿರುದ್ಧ ಧ್ವನಿ ಎತ್ತಿದೆ ಪತ್ರಿಕೆಯಾಗಿದೆ. ಬದುಕಿರುವ ವರೆಗೆ ಪ್ರಜಾವಾಣಿ ಜೊತೆ ಇರುತ್ತೇವೆ. ಮಕ್ಕಳಿಗೂ ಓದಲು ಹೇಳುತ್ತೇವೆ ಎಂದರು.

ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಸಂಪೂರ್ಣ ಜ್ಞಾನ, ಸುದ್ದಿ ನೀಡುವ ಪತ್ರಿಕೆಯಾಗಿದೆ. ಮಕ್ಕಳಿಗೆ ಶೈಕ್ಷಣಿಕ ಪೂರಕ ಮಾಹಿತಿ ನೀಡುವ ಪತ್ರಿಕೆಯಾಗಿದೆ ಎಂದರು.

ಎಡವೂ ಎಲ್ಲ, ಬಲವೂ ಎಲ್ಲ: ‘ಅಮೃತ ಸಾಹಿತ್ಯೋತ್ಸವ’ದ ಅಧ್ಯಕ್ಷತೆ ವಹಿಸಿ ಮಾತನಾಡಿದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕೆಲ ಓದುಗರು ‘ಪ್ರಜಾವಾಣಿ’ ಎಡಕ್ಕೆ ವಾಲಿದೆ ಎಂದು, ಇನ್ನು ಕೆಲವರು ಬಲಕ್ಕೆ ವಾಲಿದೆ ಎಂದು ಹೇಳುತ್ತಾರೆ. ಆದರೆ, ಪ್ರಜಾವಾಣಿ ಎಡವೂ ಅಲ್ಲ, ಬಲವೂ ಅಲ್ಲ, ಮಧ್ಯವೂ ಅಲ್ಲ. ಕನ್ನಡನಾಡಿನ ಒಂದು ಮಾಧ್ಯಮ ಅಷ್ಟೇ ಎಂದರು.

‘ಪ್ರಜಾವಾಣಿ’ 75 ವರ್ಷಗಳಲ್ಲಿ ತಾನು ಮಾತ್ರ ಬೆಳೆದಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳ ಬೆಳವಣಿಗೆಯನ್ನು ದಾಖಲಿಸಿದೆ. ಈ ರಾಜ್ಯ ಸರಿಯಾದ ದಾರಿಯಲ್ಲಿ ಸಾಗುವಂತೆ ಬಾರುಕೋಲು ಹಿಡಿದುಕೊಂಡ ಪತ್ರಿಕೆ ಪ್ರಜಾವಾಣಿಯಾಗಿದೆ ಎಂದು ಹೇಳಿದರು.

75 ವರ್ಷಗಳಿಂದ ಪ್ರಜಾವಾಣಿ ಮನುಷ್ಯರನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮುನಷ್ಯತ್ವ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. 75 ವರ್ಷಗಳಲ್ಲಿ ತನ್ನ ಸಿದ್ಧಾಂತ, ಪರಂಪರೆಯನ್ನು ಎಂದೂ ಬದಲಾವಣೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಆಶಯ ನುಡಿಗಳನ್ನಾಡಿದ ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥರಾದ ರಶ್ಮಿ ಎಸ್‌., ಪ್ರಜಾವಾಣಿ ಕೇವಲ ಸುದ್ದಿ ನೀಡುವುದಕ್ಕೆ ಮಾತ್ರ ಸೀಮಿತವಾಗದೇ ಸಮಾಜ ಕಟ್ಟುವ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿದೆ ಎಂದರು.

ಸಾಹಿತ್ಯ, ಸಿನಿಮಾ, ಸಂಗೀತ, ವಾಣಿಜ್ಯ, ಶಿಕ್ಷಣ, ಆರೋಗ್ಯ, ಕ್ರೀಡೆಗೆ ಮೊದಲ ಆದ್ಯತೆ ನೀಡಿದ ಪತ್ರಿಕೆ ಪ್ರಜಾವಾಣಿಯಾಗಿದೆ. ಕನ್ನಡ ಚಳವಳಿ, ಹೋರಾಟಗಳಿಗೆ ಕಿಡಿ ಹಚ್ಚಿದ್ದು ಪ್ರಜಾವಾಣಿ. ಮೊದಲ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಆಚರಿಸಿದ್ದು ಸರ್ಕಾರವಲ್ಲ, ಪ್ರಜಾವಾಣಿಯಾಗಿದೆ. ನಾಡಿನಲ್ಲಿ ಹಲವು ಇತಿಹಾಸ ನಿರ್ಮಿಸಿರುವ ಪ್ರಜಾವಾಣಿ ತನ್ನ ಅಮೃತ ಮಹೋತ್ಸವದಲ್ಲಿ ತನ್ನ ಅಸ್ಮಿತೆ ಪ್ರತಿಷ್ಠಾಪಿಸಲು ಎಲ್ಲರೊಂದಿಗೆ ಧ್ವನಿಗೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಆಲಮೇಲದ ಶ್ರೀ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ಸತ್ಯಾನಂದ ಪಾತ್ರೋಟ, ಕೆ.ಪಿ.ಆರ್‌. ಶುಗರ್ಸ್‌ ಸ್ಥಾನಿಕ ನಿರ್ದೇಶಕ ಮಲ್ಲಿಕಾರ್ಜುನ ಜೋಗೂರ, ಪ್ರಜಾವಾಣಿ ಜಾಹೀರಾತು ವಿಭಾಗದ ಎ.ಜಿಎಂ. ದಿವಾಕರ ಭಟ್‌, ಪ್ರಸರಣ ವಿಭಾಗದ ರವಿ ಹೆಗಡೆ, ವಿಜಯಲಕ್ಷ್ಮಿ ಆರ್‌.ಕತ್ತಿ, ಡಾ.ರಮೇಶ ಕತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.