ADVERTISEMENT

ಸಿಂದಗಿ, ಹಾನಗಲ್‌ನಲ್ಲಿ ಹಣಕ್ಕೆ ಟಿಕೆಟ್‌ ನೀಡಿದ ಕುಮಾರಸ್ವಾಮಿ: ಜಮೀರ್ ಅಹ್ಮದ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:04 IST
Last Updated 23 ಅಕ್ಟೋಬರ್ 2021, 15:04 IST
ಜಮೀರ್ ಅಹ್ಮದ್
ಜಮೀರ್ ಅಹ್ಮದ್   

ಆಲಮೇಲ(ವಿಜಯಪುರ): ಕುಮಾರಸ್ವಾಮಿ ಅವರು ಬಿಜೆಪಿಯಿಂದ ಹಣ ಪಡೆದು ಸಿಂದಗಿ ಮತ್ತು ಹಾನಗಲ್‌ನಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದರು.

ಆಲಮೇಲ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿಯೊಂದಿಗೆ ಅಪರೋಕ್ಷವಾಗಿ ಕೈ ಜೋಡಿಸುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿಯಿಂದ ಸೂಟ್ ಕೇಸ್ ಪಡೆದು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮುಸ್ಲಿಮರ ಮೇಲೆ ಕುಮಾರಸ್ವಾಮಿಗೆ ಕಾಳಜಿಯಲ್ಲ, ಬದಲಾಗಿ ಅವರು ನಿಲ್ಲಿಸುತ್ತಾ ಬಂದಿರುವ ಎಲ್ಲಾ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸೋಲುಂಡು ದಿವಾಳಿಯಾಗಿದ್ದಾರೆ. ಆ ಮೂಲಕ ಒಳಗೊಳಗೆ ಮುಸ್ಲಿಂರನ್ನು ಮಣಿಸುವುದು ಅವರ ಕಾರ್ಯ ಎಂದರು.

ADVERTISEMENT

ಸಿಂದಗಿಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಠಿಕಾಣಿ ಹೊಡಿದ್ದು ಏಕೆ, ಹಾನಗಲ್‌ಗೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಿಂದಗಿಯಲ್ಲೂ ಬಿಜೆಪಿ ಅಭ್ಯರ್ಥಿಯಿಂದ ಸೂಟ್ ಕೇಸ್ ಪಡೆದಿದ್ದಾರೆ. ಅದಕ್ಕಾಗಿ ಇಲ್ಲಿ ಠಿಕಾಣಿ ಹಾಕಿದ್ದಾರೆ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ಏನು ಮಾಡಿದ್ದಾರೆ? ಇದ್ದ ಶಾದಿಭಾಗ್ಯ ಸೇರಿದಂತೆ ಎಲ್ಲವೂ ಕಸಿದುಕೊಂಡಿದ್ದಾರೆ. ಅಲ್ಲದೇ, ಒಂದು ವರ್ಷವು ಹಜ್ ಕಾರ್ಯಕ್ರಮಕ್ಕೆ ಬರಲಿಲ್ಲ ಇದೇನಾ ನಿಮ್ಮಲ್ಲಿರುವ ಮುಸ್ಲಿಂ ರ ಮೇಲಿನ ಕಾಳಜಿ, ಅವರ ಡೊಂಬರಾಟ ಇಲ್ಲಿ ನಡೆಯೊಲ್ಲ, ಇಲ್ಲಿನ ಮುಸ್ಲಿಂರು ಬಹಳ ಜಾಣರಿದ್ದಾರೆ. ಬಿಜೆಪಿ ಗೆಲ್ಲಿಸಲು ನೀವು ಹೂಡಿರುವ ಆಟ ಗೊತ್ತಿದೆ. ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಶಾಂತಿ ಹೆಚ್ಚಾಗಿದೆ, ಜನರನ್ನು ವಂಚಿಸುತ್ತಿದ್ದಾರೆ, ಅವರು ದೇಶಕ್ಕೆ ಅಚ್ಚೇ ದಿನ ಮಾಡುವ ಮಾತನಾಡುತ್ತಲೇ ಇದ್ದಾರೆ ಯಾರಿಗೆ ಅಚ್ಚೇದಿನ ಬಂದಿದೆ ಹೇಳಿ ಎಂದರು.

ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್‌ ದೇವರಮನಿ, ಬೀದರ ಶಾಸಕ ರಹೀಂ ಖಾನ್, ಮಾಜಿ ಶಾಸಕ ಹಸನಸಾಬ್‌ ದೊಟ್ಟಿಹಾಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೈಬೂಬ, ಸಾಧಿಕ ಸುಂಬಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.