ADVERTISEMENT

ವಿಜಯಪುರ: ಎಸ್‌ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹ

ವಿಭಾಗಮಟ್ಟದ ಸಮಾವೇಶ ಬಾಗಲಕೋಟೆಯಲ್ಲಿ ನ.29ಕ್ಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 14:01 IST
Last Updated 25 ನವೆಂಬರ್ 2020, 14:01 IST
ವಿಜಯಪುರದಲ್ಲಿ ಬುಧವಾರ ಕುರುಬ ಸಮಾವೇಶದ ಕರಪತ್ರಗಳನ್ನು ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು
ವಿಜಯಪುರದಲ್ಲಿ ಬುಧವಾರ ಕುರುಬ ಸಮಾವೇಶದ ಕರಪತ್ರಗಳನ್ನು ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು   

ವಿಜಯಪುರ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ನ.29ರಂದು ಬೆಳಗಾವಿ ವಿಭಾಗ ಮಟ್ಟದ ಸಮಾವೇಶವನ್ನು ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಹ ಕಾರ್ಯದರ್ಶಿ ರಾಜು ಬಿರಾದಾರ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕುರುಬ ಸಮಾವೇಶದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ಬಾಗಲಕೋಟೆಯ ಕಾಳಿದಾಸ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದರು.

ದೇಶದಾದ್ಯಂತ ಹರಡಿಕೊಂಡಿರುವ ಕುರುಬರು ಮೂಲತಃ ಬುಡಕಟ್ಟು ಜನಾಂಗದವರಾಗಿದ್ದಾರೆ. ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ರಾಜ್ಯದಲ್ಲಿರುವ ಎಲ್ಲ ಕುರುರನ್ನು ಎಸ್‌ಟಿ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಮೂಲಕ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೂ ಸೌಲಭ್ಯಗಳು ದೊರೆಯುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳು ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ಸಹ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಹೇಳಿದರು.

ಪಾದಯಾತ್ರೆ:

ಹೋರಾಟವು ಪಕ್ಷಾತೀತವಾಗಿ ಸಮಾಜದ ಗುರುಗಳ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರು ವರೆಗೆ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಕಿತ್ತೂರ, ಮುಖಂಡರಾದ ಸಂಗಮೇಶ ಓಲೆಕಾರ, ಶಿಲ್ಪಾ ಎಸ್‌.ಕುದರಗೊಂಡ, ರಾಜಶೇಖರ ಕುರಿಯರ್‌, ಕರಿಯಪ್ಪ ಬಸ್ತಾಳ್‌, ಸಾಬು ಮಾಶ್ಯಾಳ, ರಾಜು ಕಂಬಾಗಿ, ಸದಾಶಿವ ಬುಟಾಳ್‌, ಚಿನ್ನು, ಸುರೇಶ ಕಣ್ಣೂರ, ಮನು ಭಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.