ಮುದ್ದೇಬಿಹಾಳ: ‘ಮಹಿಳೆಯರ ಸಬಲೀಕರಣದ ಜೊತೆ ಗ್ರಾಮೀಣ ಮಕ್ಕಳ ಲಾಲನೆ-ಪಾಲನೆಗೆ ಕೂಸಿನ ಮನೆಗಳು ಸಹಕಾರಿಯಾಗಲಿವೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ಪಂಚಾಯಿತಿಗಳ ಸಹಯೋಗದಲ್ಲಿ ಕೂಸಿನ ಮನೆ (ಶಿಶುಪಾಲನಾ ಕೇಂದ್ರ)ಗಳ ಮಕ್ಕಳ ಆರೈಕೆದಾರರಿಗೆ ಆಯೋಜಿಸಿದ್ದ ಎರಡನೇ ಹಂತದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೂಲಿ ಅರಸಿ ಹೋಗುವ ಗ್ರಾಮೀಣ ಮಹಿಳೆಯರಿಗೆ ಕೂಸಿನ ಮನೆಗಳು ಆಸರೆಯಾಗಲಿವೆ. 1 ರಿಂದ 3 ವರ್ಷದೊಳಗಿನ ಚಿಕ್ಕ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ನಿಶ್ಚಿಂತೆಯಿಂದ ಕೂಲಿ ಕೆಲಸಕ್ಕೆ ಹೋಗಬಹುದು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಬೌದ್ಧಿಕ ಬೆಳವಣಿಗೆಯಲ್ಲಿ ಕೂಸಿನ ಮನೆಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು.
ತಾಳಿಕೋಟಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಮಾತನಾಡಿ, ಕೂಸಿನ ಮನೆ ಆರೈಕೆದಾರರು ತರಬೇತಿ ಪಡೆದು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಕೂಸಿನ ಮನೆಗಳ ಯಶಸ್ವಿಗೆ ತಮ್ಮ ಕೊಡುಗೆ ಬಹುಮುಖ್ಯ ಪಾತ್ರ ವಹಿಸಲಿದೆ. ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೆಲಸ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ ಮಾಸ್ಟರ್ ಟ್ರೈನರ್ ಆಗಿ ತರಬೇತಿ ನೀಡಿದರು.
ತಾಳಿಕೋಟಿ ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ಮಲಕಪ್ಪ ಮಾದರ, ಕೂಸಿನ ಮನೆ ಆರೈಕೆದಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.