ADVERTISEMENT

ಕೇಂದ್ರದ ಸಾಧನೆ ಜನರಿಗೆ ತಿಳಿಸಿ: ಸಂಸದ ರಮೇಶ ಜಿಗಜಿಣಗಿ

ಇಂಡಿ ಶಾಖಾ ಕಾಲುವೆ ಮರು ನಿರ್ಮಾಣಕ್ಕಾಗಿ ₹2,500 ಕೋಟಿ ವೆಚ್ಚದ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 13:34 IST
Last Updated 16 ಜೂನ್ 2025, 13:34 IST
ಸಿಂದಗಿ ತಾಲ್ಲೂಕು ಯಂಕಂಚಿ ಗ್ರಾಮದ ಹಿರೇಮಠ ಕಲ್ಯಾಣಮಂಟಪದಲ್ಲಿ ಬಿಜೆಪಿ ಮಂಡಲ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಅಮೃತಕಾಲ ಸೇವೆ, ಬಡವರ ಕಲ್ಯಾಣದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ ಕಾರ್ಯಾಗಾರವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು
ಸಿಂದಗಿ ತಾಲ್ಲೂಕು ಯಂಕಂಚಿ ಗ್ರಾಮದ ಹಿರೇಮಠ ಕಲ್ಯಾಣಮಂಟಪದಲ್ಲಿ ಬಿಜೆಪಿ ಮಂಡಲ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಅಮೃತಕಾಲ ಸೇವೆ, ಬಡವರ ಕಲ್ಯಾಣದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ ಕಾರ್ಯಾಗಾರವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು   

ಸಿಂದಗಿ: ಇಂಡಿ ಶಾಖಾ ಕಾಲುವೆ ಮರು ನಿರ್ಮಾಣಕ್ಕಾಗಿ ₹2,500 ಕೋಟಿ ವೆಚ್ಚದ ಪ್ರಸ್ತಾವವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆಯೂ ದೊರೆತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲ್ಲೂಕಿನ ಯಂಕಂಚಿ ಗ್ರಾಮದ ಹಿರೇಮಠದ ಕಲ್ಯಾಣಮಂಟಪದಲ್ಲಿ ಸೋಮವಾರ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವಿಕಸಿತ ಭಾರತ ಅಮೃತ ಕಾಲ ಸೇವೆ, ಬಡವರ ಕಲ್ಯಾಣದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಇಂಡಿ ಶಾಖಾ ಕಾಲುವೆ ಮರು ನಿರ್ಮಾಣದ ಹಿನ್ನೆಲೆಯಲ್ಲಿ ಜೂನ್ 20ರಂದು ದೆಹಲಿಯಲ್ಲಿ ಸಿಡಬ್ಲೂಸಿ ಸಭೆ ಏರ್ಪಡಿಸಿದ್ದು ನಾನು ಖುದ್ದಾಗಿ ಸಭೆಯಲ್ಲಿ ಹಾಜರಿದ್ದು ಇನ್ನಷ್ಟೂ ಒತ್ತಡ ಹಾಕುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ದೇಶದ ಆರ್ಥಿಕ ಸ್ಥಿತಿ-ಗತಿ 15ನೆಯ ಸ್ಥಾನದಿಂದ 3ನೆಯ ಸ್ಥಾನಕ್ಕೇರಿದೆ. ಇದರ ಕೀರ್ತಿ ಸಂಪೂರ್ಣ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ’  ಎಂದು ಜಿಗಜಿಣಗಿ ಗುಣಗಾನ ಮಾಡಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ‘ವಿಜಯಪುರ ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿ ಅವಧಿಯಲ್ಲಿ ಮೋದಿ ಸರ್ಕಾರದಿಂದ ₹1ಲಕ್ಷ ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದೇಶದಲ್ಲಿ ಕೇವಲ 20 ವಿಮಾನ ನಿಲ್ದಾಣಗಳಿದ್ದವು. ಮೋದಿಯವರ ಸರ್ಕಾರದಲ್ಲಿ ವಿಮಾನ ನಿಲ್ದಾಣಗಳು 216 ಕ್ಕೆ ಏರಿಕೆಯಾಗಿವೆ. ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಂಡಿವೆ. ಅಲ್ಲದೇ ಇಡೀ ದೇಶ ಅಗಾಧ ರೀತಿಯಲ್ಲಿ ಬದಲಾಗಿದೆ’  ಎಂದು ತಿಳಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಿಂದಗಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ವೈದ್ಯಾಧಿಕಾರಿ ಮಹೇಶ ಮಡಿವಾಳರ ಅವರನ್ನು ಗೌರವಿಸಲಾಯಿತು.

ಕಾರ್ಯಾಗಾರದಲ್ಲಿ ಬಿಜೆಪಿ ಪ್ರಮುಖರಾದ ಮಳುಗೌಡ ಪಾಟೀಲ, ಸಂತೋಷ ಪಾಟೀಲ ಡಂಬಳ, ಈರಣ್ಣ ರಾವೂರ, ಅಶೋಕ ಅಲ್ಲಾಪೂರ, ಮಲ್ಲಿಕಾರ್ಜುನ ಜೋಗೂರ, ಸಿದ್ದು ಬುಳ್ಳಾ, ಸಂಗನಗೌಡ ಪಾಟೀಲ, ರಾಜಶೇಖರ ಪೂಜಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಬಿ.ಎಚ್.ಬಿರಾದಾರ, ನೀಲಮ್ಮ ಯಡ್ರಾಮಿ, ಪ್ರಶಾಂತ ಕದ್ದರಕಿ ಭಾಗವಹಿಸಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಶೂನ್ಯ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಇಲ್ಲ. ಎಲ್ಲಿಯೂ ರಸ್ತೆ ನಿರ್ಮಿಸಿಲ್ಲ
ರಮೇಶ ಜಿಗಜಿಣಗಿ,ಸಂಸದ
‘ಮೋದಿ ಸಾಧನೆ ಮನೆ ಮನೆಗೂ ತಲುಪಲಿ’
‘ಇಡೀ ವಿಶ್ವವೇ ಮೆಚ್ಚಿದ ಪುಣ್ಯಾತ್ಮ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ 11 ವರ್ಷದ ಸಾಧನೆ ಅಗಾಧವಾದುದು. ಅವರ ಸಾಧನೆಯನ್ನು ಬಿಜೆಪಿ ಕಾರ್ಯಕರ್ತರು ಹಳ್ಳ-ಹಳ್ಳಿ ಮನೆ ಮನೆಗಳಿಗೂ ತಲುಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಮೋದಿ ಅಸಾಮಾನ್ಯ ಕಾರ್ಯವೇ ಇಡೀ ವಿಶ್ವವೇ ಕೊಂಡಾಡಲು ಕಾರಣವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.