ವಿಜಯಪುರ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಆದೇಶದ ಮೇರೆಗೆ ಲೋಕಾಯುಕ್ತ ನ್ಯಾಯಾಧೀಶರು, ಅಧಿಕಾರಿಗಳನ್ನು ಒಳಗೊಂಡ 13 ತಂಡಗಳು ಜಿಲ್ಲೆಯಾದ್ಯಂತ ಮೂರು (ಆಗಸ್ಟ್ 10 ರಿಂದ 12) ದಿನಗಳಲ್ಲಿ 55 ಕಚೇರಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ, ಮಧ್ಯವರ್ತಿಗಳ ಹಾವಳಿ ಪತ್ತೆ ಹಚ್ಚಲಾಗಿದೆ.
ಲೋಕಾಯುಕ್ತರ ಕಾರ್ಯದರ್ಶಿ ಶ್ರೀನಾಥ ಕೆ., ನ್ಯಾಯಾಧೀಶರಾದ ನರಸಿಂಹ ಎಂ.ವಿ., ಎ.ವಿ.ಪಾಟೀಲ, ಎಸ್.ಎಲ್. ಪಾಟೀಲ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯ್ತಿ, ತಹಶೀಲ್ದಾರ್ ಕಚೇರಿಗಳು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳು, ಉಪ ನೋಂದಣಾಧಿಕಾರಿಗಳ ಕಚೇರಿಗಳು, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಬಕಾರಿ ಇಲಾಖೆ ಕಚೇರಿಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ಮಾಡಿದಾಗ ಅವ್ಯವಹಾರ, ಅದಕ್ಷತೆ ಬಯಲಾಗಿವೆ.
ಪುರಸಭೆ, ಪಟ್ಟಣ ಪಂಚಾಯಿತಿ ಕಾರ್ಯಾಲಯಗಳಲ್ಲಿ ಇ–ಖಾತಾ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡಿ ವಿಲೇ ಮಾಡುತ್ತಿರುವುದು ಪತ್ತೆ ಮಾಡಲಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವೂ ಬಯಲಾಗಿದೆ ಎಂದು ಲೋಕಾಯುಕ್ತ ಎಸ್.ಪಿ.ಮಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಹಶೀಲ್ದಾರ್ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ವಿಳಂಬವಾಗಿ ಪಿಂಚಣಿಯನ್ನು ಪಾವತಿ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಪೌತಿ ಖಾತೆಗಳ ಆಂದೋಲನದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದು, ಸಕಾಲ ಅರ್ಜಿಗಳನ್ನು ವಿಳಂಬವಾಗಿ ವಿಲೇ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಕಲುಷಿತ ನೀರು ಬಳಕೆ ಮಾಡುತ್ತಿರುವುದು, ಕಳಪೆ ಆಹಾರವನ್ನು ಪೂರೈಸುತ್ತಿರುವುದು ಅಲ್ಲದೇ, ಮೂಲ ಸೌಲಭ್ಯಗಳನ್ನು ನೀಡದಿರುವುದನ್ನು ಪತ್ತೆ ಮಾಡಲಾಗಿದೆ.
ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕರಿಸಿರುವುದು ಮತ್ತು ಅರ್ಜಿಗಳನ್ನು ವಿಳಂಬವಾಗಿ ವಿಲೆ ಮಾಡುತ್ತಿರುವುದು ಪತ್ತೆಯಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಔಷಧಗಳು ಮತ್ತು ಅವಧಿ ಮೀರುವ ಅಂಚಿನಲ್ಲಿರುವ ಔಷಧಗಳನ್ನು ದಾಸ್ತಾನಿಟ್ಟು ವಿತರಿಸುತ್ತಿರುವುದು ಪತ್ತೆ ಹಚ್ಚಲಾಗಿದೆ.
ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳು ಅನಧಿಕೃತವಾಗಿ ಇರುವುದು ಹಾಗೂ ಸಿಬ್ಬಂದಿಗಳು ಪೋನ್ ಪೇ ಮೂಲಕ ಹಣ ಪಡೆದಿರುವುದು ಪತ್ತೆಯಾಗಿದೆ.
ವಿಜಯಪುರ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಲೇಔಟ್‌ಗಳ ಅರ್ಜಿಗಳನ್ನು ಅಕ್ರಮವಾಗಿ ವಿಲೇ ಮಾಡಿರುವುದು ಮತ್ತು ಅರ್ಜಿ ವಿಲೆ ಮಾಡದೇ ಇರುವುದು ಪತ್ತೆಯಾಗಿದೆ.
ಅಬಕಾರಿ ಕಚೇರಿಗಳಲ್ಲಿ 10 ವರ್ಷಗಳ ಅವಧಿ ಮುಗಿದ ಮಾದಕ ವಸ್ತುಗಳನ್ನು ವಿಲೆ ಮಾಡದೇ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ.
ಕೊಲ್ಹಾರ ಪುರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೊಳಿಸುವ ವಾಹನಗಳ ಲೈಸನ್ಸ್ ಅವಧಿ ಮುಗಿದಿದ್ದರೂ ಅವುಗಳನ್ನು ಬಳಸುತ್ತಿರುವುದನ್ನು ಲೋಕಾಯುಕ್ತ ತಂಡ ಪತ್ತೆ ಹಚ್ಚಿದೆ.
ಕುಡಿದು ಕಚೇರಿಗೆ ಬಂದ ಎಫ್‌ಡಿಎ
ಕೊಲ್ಹಾರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ ಕಲ್ಲೂರ ಕರ್ತವ್ಯದ ವೇಳೆ ಮಧ್ಯ ಸೇವನೆ ಮಾಡಿರುವುದು ಕಂಡುಬಂದಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಧ್ಯ ಸೇವನೆ ಮಾಡಿದ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಎಸ್.ಪಿ.ಮಲ್ಲೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.